ಬೆಂಗಳೂರು: ಸರ್ಕಾರದಲ್ಲಿರುವ ಸಚಿವರು ಕೆಲಸ ಮಾಡಲು ಆಗದಿದ್ದರೆ, ಅಧಿಕಾರ ಬಿಟ್ಟು ಮನೆಗೆ ತೆರಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಉಂಟಾಗಿದೆ ಆದರೆ ಯಾವೋರ್ವ ಮಂತ್ರಿಯೂ ಈ ಬಗ್ಗೆ ಗಮನಹರಿಸಿಲ್ಲ. ಮಂತ್ರಿಗಳಿಗೆ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಇನ್ಯಾಕೆ ಇರುವುದು? ಆಗದಿದ್ದರೆ ಬಿಟ್ಟು ಮನೆಗೆ ಹೋಗಲಿ ಎಂದು ಕಿಡಿಕಾರಿದ್ದಾರೆ.
ಮಂತ್ರಿಗಳ ಸ್ವಂತಕೋಸ್ಕರ ರಾಜ್ಯದ ಜನತೆ ಬಲಿಕೊಡುವುದಕ್ಕೆ ಸಾಧ್ಯವಿಲ್ಲ. ಪ್ರಧಾನ ಮಂತ್ರಿಗಳು ಯಾವ ಸಹಾಯ ಕೂಡ ಮಾಡಲಿಲ್ಲ, ಫೋನ್ ಮಾಡಿದ್ದಾರೆನ್ನುವುದು ಬಿಟ್ಟರೆ ಏನೂ ಇಲ್ಲ. ಇನ್ನು ಅಶೋಕ್ ಕೇವಲ 10 ನಿಮಿಷ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೆ ಏನು ತಿಳಿದುಕೊಳ್ಳಲು ಸಾಧ್ಯ. ಈ ಬಗ್ಗೆ ಮಾಧ್ಯಮದವರು ಜನರಿಗೆ ಅರ್ಥ ಮಾಡಿಸುವ ಕೆಲಸ ಮಾಡಬೇಕು ಎಂದರು.
ಇನ್ನು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವಿಚಾರ ಮಾತನಾಡಿ, ಇವತ್ತು ನಮ್ಮ ಮುಖಂಡರ ಸಭೆ ಕರೆದಿದ್ದೇನೆ. ನಮ್ಮ ಕಾರ್ಯಕರ್ತರಿಗೆ ಈಗ ಕಾನ್ಫಿಡೆನ್ಸ್ ಬಂದಿದೆ, ಚುನಾವಣೆಯಲ್ಲಿ ಕೆಲಸ ಮಾಡಬೇಕೆಂಬ ಧೈರ್ಯ ಬಂದಿದೆ. ಹಿಂದಿನ ಶಾಸಕರು ವೋಟು ಮಾರಿಕೊಂಡರು ಎನ್ನುವ ನೋವು, ಬೇಸರ ಜನರನ್ನ ಕಾಡತೊಡಗಿದೆ, ಆ ನೋವನ್ನ ನಮ್ಮ ಬಳಿ ತೋಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಏನಾಗುತ್ತದೆ ಎಂದು ಕಾದು ನೋಡೋಣ ಎಂದರು.