ಬೆಂಗಳೂರು: 2021ನೇ ಸಾಲಿನ ಮಾರ್ಚ್ನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಖಂಡಿತವಾಗಿಯೂ ನಡೆಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರದ 2021ನೇ ಸಾಲಿನ ಹೊಸ ದಿನಚರಿ ಮತ್ತು ಹೊಸ ಕ್ಯಾಲೆಂಡರ್ಗಳನ್ನು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ವರ್ಷ ಮಾರ್ಚ್ನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಮಾಡುವುದಿಲ್ಲ. ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯ ಕೊಡುತ್ತೇವೆ. ಇನ್ನು, 1 ರಿಂದ 9ನೇ ತರಗತಿ ವರಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳ ಆಧಾರದ ಮೇಲೆ ಪರೀಕ್ಷೆಗಳನ್ನು ನಡೆಸುವ ಬಗ್ಗೆ ನಿರ್ಧರಿಸುತ್ತೇವೆ. ಪರೀಕ್ಷೆ ಇಲ್ಲದೇ ಪಾಸ್ ಮಾಡುವ ಉದ್ದೇಶವಿಲ್ಲ ಎಂದರು.
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಆರಂಭದ ಕ್ಷಣಗಣನೆಯಲ್ಲಿದ್ದೇವೆ. ಸಿದ್ದತೆಗಳು ಪೂರ್ಣಗೊಂಡಿದ್ದು, ನಾನು ಸೇರಿದಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಎಲ್ಲ ಹಿರಿಯ ಅಧಿಕಾರಿಗಳು ಒಂದೊಂದು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಎಸ್ ಓಪಿ ಮಾರ್ಗಸೂಚಿ ಅನುಷ್ಠಾನದ ಜತೆಗೆ ಶಿಕ್ಷಕರ ಜತೆ ಮಾತುಕತೆ ನಡೆಸಿ ಮಾಹಿತಿ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು.
ಆತಂಕ ಬೇಡ:ಯಾವುದೇ ರೀತಿಯ ಆತಂಕಬೇಡವೆಂದು ಪೋಷಕರಿಗೆ ಮನವಿ ಮಾಡುತ್ತೇನೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಡ್ಡಾಯವಲ್ಲ. ವಾಲೆಂಟರಿ ಅಲ್ಲ ಮ್ಯಾನಂಡೇರಿ. ಹಾಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಪೋಷಕರ ಆಯ್ಕೆಗೆ ಬಿಡಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಶೂನ್ಯ ಪ್ರಮಾಣದಲ್ಲಿದೆ ಎಂದರು.
"ಬನ್ನಿ ಕೊರೊನಾವನ್ನು ಓಡಿಸೋಣ, ವಿದ್ಯಾರ್ಥಿಗಳನ್ಮು ಓದಿಸೋಣ" ಇದು ನಮ್ಮ ಟ್ಯಾಗ್ ಲೈನ್ ಎಂದ ಸಚಿವರು, ನೀವು ನಿಮ್ಮ ಮಕ್ಕಳನ್ನು ಮನೆಯಲ್ಲಿ ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತೀರೋ ಅಷ್ಟೇ ಜೋಪಾನವಾಗಿ ಮಕ್ಕಳನ್ನು ಶಿಕ್ಷಕರು ಶಾಲೆಗಳಲ್ಲಿ ನೋಡಿಕೊಳ್ಳುತ್ತಾರೆ. ನೀವು ಮಕ್ಕಳನ್ನು ಜೋಪಾನವಾಗಿ ಶಾಲೆಗೆ ಕಳುಹಿಸಿ, ನಾವೂ ಅಷ್ಟೇ ಜೋಪಾನವಾಗಿ ಮಕ್ಕಳನ್ನು ಶಾಲೆಯಲ್ಲಿ ನೋಡಿಕೊಂಡು ಮನೆಗೆ ಕಳುಹಿಸುತ್ತೇವೆ ಎನ್ನುವ ಭರವಸೆ ನೀಡುತ್ತೇನೆ ಎಂದು ಹೇಳಿದರು.
ಮಕ್ಕಳನ್ನು ಶಾಲೆಯಲ್ಲಿ ಸ್ವಾಗತಿಸಲು ಶಾಲೆಗಳ ಎಸ್ ಡಿಎಂಸಿ ಸದಸ್ಯರು ಸಿದ್ದತೆ ಮಾಡಿಕೊಂಡಿದ್ದಾರೆ. ನಾಳೆ ಬೆಳಗ್ಗೆ ಮೊದಲ ಅವಧಿಯಲ್ಲಿ ಶಿಕ್ಷಕರು ಮೊದಲು ಮಕ್ಕಳ ಜತೆ ಮಾತನಾಡಬೇಕು. ಮಕ್ಕಳಿಗೆ ಅವರ ಭಾವನೆ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು. ಎರಡನೇ ಅವಧಿಯಲ್ಲಿ ಕೊರೊನಾ ಸೋಂಕಿನ ವಿಷಯದಲ್ಲಿ ಮಾರ್ಗದರ್ಶನ ಮಾಡುವಂತೆ ಶಿಕ್ಷಕರಿಗೂ ಮನವಿ ಮಾಡುತ್ತೇನೆ ಎಂದು ತಿಳಿಸಿದರು.