ಬೆಂಗಳೂರು: ಜಾತಿಗೊಬ್ಬ ಮುಖ್ಯಮಂತ್ರಿಯನ್ನು ಮಾಡಲು ಸಾಧ್ಯವಿಲ್ಲ. ಒಕ್ಕಲಿಗರ ವಿಚಾರದಲ್ಲಿ ಲಕ್ಷ್ಮಣ ರೇಖೆ ದಾಟಬೇಡಿ ಎಂದು ಕಾಂಗ್ರೆಸಿಗರಿಗೆ ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದ ಸಂವಿಧಾನ ಅಡಿಯಲ್ಲಿ ಸಿಎಂ ಆಯ್ಕೆ ಆಗ್ತಾರೆ. ವೀರೇಂದ್ರ ಪಾಟೀಲ್ ವಿಚಾರ ಗಮನದಲ್ಲಿರಲಿ. ಅವರ ಹಿಂದೆ ಯಾರೂ ನಿಲ್ಲಲಿಲ್ಲ. ಜಮೀರ್ ಹೇಳಿಕೆ ಹಿಂದೆ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ತಮ್ಮದು ಕೊನೆ ಚುನಾವಣೆ ಅಂತ ಹೇಳಿದ್ದಾರೆ. ಲಾಸ್ಟ್ ಬಾಲ್ ಸಿಕ್ಸ್ ಹೊಡಿಲೇಬೇಕು. ಹಾಗಾಗಿ, ಈ ರೀತಿ ಮಾಡ್ತಿದ್ದಾರೆ. ಕಾಂಗ್ರೆಸ್ ಒಳಗಿನ ಗುದ್ದಾಟದಿಂದ ಇಡೀ ಕಾಂಗ್ರೆಸ್ ಪತನವಾಗ್ತಿದೆ. ಸಿದ್ದರಾಮಯ್ಯ ಪರ ಬ್ಯಾಟ್ ಬೀಸುತ್ತಿದ್ದಾರೆ ಎಂದರು.
ಡಿಕೆಶಿ ಹಿಂದೆ ಯಾರೂ ಇಲ್ಲ ಅನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಪರ ಅವರೇ ಬ್ಯಾಟ್ ಸಿದ್ಧ ಮಾಡಿಕೊಳ್ತಿದ್ದಾರೆ. ಇವರಿಗೆ ಹೇಳೋರು, ಕೇಳೋರು ಯಾರೂ ಇಲ್ಲ. ಹೈಕಮಾಂಡ್ ಕೂಡ ಇದೇ ಪರಿಸ್ಥಿತಿಯಲ್ಲಿ ಇದೆ. ಕಾಂಗ್ರೆಸ್ ಮನೆ ಜಗಳ ಬೀದಿ ರಂಪ ಆಗಿದೆ. ಮನೆಯೊಳಗೆ ತೀರ್ಮಾನ ಆಗಬೇಕಿರೋ ವಿಚಾರ ಬೀದಿಗೆ ಬಂದಿದೆ. ಹೈಕಮಾಂಡ್ ಇದೆಯೋ, ಇಲ್ಲವೋ ಅನ್ನೋದು ತಿಳಿತಾ ಇಲ್ಲ. ಕಾಂಗ್ರೆಸ್ನ ಒಬ್ಬ ಎಂಎಲ್‌ಎ ಕೆಪಿಸಿಸಿ ಅಧ್ಯಕ್ಷರಿಗೆ ಸವಾಲ್ ಹಾಕ್ತಾರೆ. ಪ್ರಾಣ ಇರೋವರೆಗೂ ಮಾತಾಡ್ತೀನಿ ಅಂತ ಸವಾಲ್ ಹಾಕಿದಾರೆ. ಜಮೀರ್ ಹಿಂದೆ ದೊಡ್ಡವರಿದ್ದಾರೆ. ಹಾಗಾಗಿ ಮಾತಾಡ್ತಾರೆ. ಸೇರಿಗೆ ಸವ್ವಾ ಸೇರು ಅಂತ ಆಗಿದೆ ಎಂದು ಟಾಂಗ್ ನೀಡಿದರು.