ಬೆಂಗಳೂರು: ಬೆಂಗಳೂರಿನ 30 ಕೆರೆಗಳನ್ನು ಮುಚ್ಚಲಾಗಿದ್ದು, ಅದರಿಂದ ಈ ನೆರೆ ಪರಿಸ್ಥಿತಿ ಎದುರಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಆರೋಪಿಸಿದರು.
ವಿಧಾನಸಭೆಯಲ್ಲಿ ಮಳೆ ಅವಾಂತರದ ಬಗ್ಗೆ ಚರ್ಚೆ ವೇಳೆ ಮಾತನಾಡಿದ ಅವರು, ಕೆರೆಗಳನ್ನು ಒತ್ತುವರಿ ಮಾಡಿದವರ ಬಗ್ಗೆ ಮಾಹಿತಿ ಕೊಡುತ್ತೇನೆ. ಕೆರೆಗೆ ಕೆರೆನೇ ಮುಚ್ಚಿ ಹಾಕಿದ್ದಾರೆ. ಹಾಗಾದರೆ ಅವರಿಗೆ ಶಿಕ್ಷೆ ಆಗಬೇಕಲ್ವಾ?. ಕೆರೆಗಳನ್ನು ಮುಚ್ಚಿದ ಕಾರಣಕ್ಕೆ ಇಂದು ಸ್ಥಿತಿ ಹೀಗಾಗಿದೆ. ಅದು ಬಿಟ್ಟು ನಮ್ಮ ಮೇಲೆ ಆರೋಪ ಮಾಡಿದರೆ ಹೇಗೆ?. ಬ್ರಾಂಡ್ ಬೆಂಗಳೂರು ಹಾಳಾದರೆ ನಮಗೆ ಕೆಟ್ಟ ಹೆಸರು ಬರೋದು ಎಂದು ವಿಷಾದ ವ್ಯಕ್ತಪಡಿಸಿದರು.
ಸುಮಾರು 30 ಕೆರೆ ಮುಚ್ಚಿ ಹಾಕಲಾಗಿದೆ. ಬಿಡಿಎ ಕೆರೆಗಳನ್ನು ಮುಚ್ಚಿದೆ. ಅಪರಾಧಿ ಯಾರಾದರೂ ಇದ್ದರೆ ದೊಡ್ಡ ಅಪರಾಧಿ ಬಿಡಿಎ. ಯಾರು ಇವರಿಗೆ ಅಧಿಕಾರ ಕೊಟ್ಟರು. ಅಂದಿನ ಸರ್ಕಾರ ಆವಾಗ ಏನು ಮಾಡುತ್ತಿತ್ತು. ಡ್ರೈ ಆದ ಕೆರೆ ಮುಚ್ಚಲು ಕ್ಯಾಬಿನೆಟ್ನಲ್ಲಿ ಆದೇಶ ಮಾಡಲಾಗಿದೆ.
ಈ ತಪ್ಪು ನಿರ್ಧಾರದಿಂದಾಗಿ ನಾವು ಇಂದು ಎದುರಿಸುತ್ತಿದ್ದೇವೆ. ಕೆರೆಗಳನ್ನು ಒತ್ತುವರಿ ಮಾಡಿದ್ದಾರೆ ಎಂಬ ಬಗ್ಗೆ ನಾಳೆ ಪಟ್ಟಿ ಕೊಡುತ್ತೇನೆ. ಡಾಲರ್ಸ್ ಕಾಲೋನಿ, ಹೆಚ್ಎಸ್ಆರ್ ಬಡಾವಣೆ, ಕೋರಮಂಗಲ ಎಲ್ಲಿಂದ ಬಂತು? ಎಂದು ಕಾಂಗ್ರೆಸ್ ಅನ್ನು ಪರೋಕ್ಷವಾಗಿ ಪ್ರಶ್ನಿಸಿದರು.
ಇಡೀ ಕೆರೆಯನ್ನೇ ಮುಚ್ಚಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕಿತ್ತಲ್ಲ?. ಕಂಠೀರವ ಸ್ಟೇಡಿಯಂ ಆಗಲಿ, ಮೆಜೆಸ್ಟಿಕ್ ಬಸ್ ನಿಲ್ದಾಣ ಆಗಲಿ ಕೆರೆ ಮುಚ್ಚಿ ಮಾಡಲಾಗಿದೆ. ಬಿಡಿಎನೇ ಇದನ್ನು ಮುಚ್ಚಿದೆ. ಇದಕ್ಕೆ ಕಾರಣ ಬಿಡಿಎನೇ. ಆಗಿನ ಸರ್ಕಾರ ಏನು ಮಾಡುತ್ತಿತ್ತು. ಬಿಜೆಪಿ ಸರ್ಕಾರನೇ ಮಾಡಿದ್ದು ಅಂತಾ ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ಖಾಯಿಲೆ ಇಂದಿನದ್ದಲ್ಲ. ಯಾವತ್ತೋ ಬಂದಿದ್ದು ಎಂದು ಆರೋಪಿಸಿದರು.