ಬೆಂಗಳೂರು: ಕರ್ನಾಟಕ ಹಾಗೂ ತಮಿಳುನಾಡು ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಬಿಜೆಪಿಯವರಿಗೆ ತಮ್ಮದೇ ಪ್ರಧಾನಮಂತ್ರಿಯನ್ನು ಭೇಟಿ ಮಾಡಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಳೆಯ ತೀವ್ರ ಕೊರತೆಯಿಂದಾಗಿ ನಮ್ಮ ರಾಜ್ಯದಲ್ಲೇ ಕುಡಿಯುವ ನೀರಿಲ್ಲ. ಅದರಲ್ಲೂ, ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುವ ಪರಿಸ್ಥಿತಿ ಇದೆ. ಹೀಗಿರುವಾಗ, ತಮಿಳುನಾಡಿಗೆ ನೀರು ಹರಿಸಬೇಕು ಎಂಬ ಆದೇಶ ಪಾಲಿಸಲು ಅಸಾಧ್ಯವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಈಗಾಗಲೇ ಸರ್ವಪಕ್ಷ ಸಭೆ ನಡೆಸಿದ್ದಾರೆ. ಚರ್ಚೆಗಾಗಿ ಪ್ರಧಾನಮಂತ್ರಿಯವರ ಸಮಯ ಕೇಳಿದ್ದರೂ ಅವರಿನ್ನೂ ಸಮಯ ಕೊಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿಯ ಇತರ ಸಂಸದರು ಇವರೆಲ್ಲ ಸೇರಿ ಪ್ರಧಾನಿಯವರ ಜೊತೆ ಚರ್ಚೆಗೆ ಸಮಯ ನಿಗದಿಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ನಮ್ಮ ಪರಿಸ್ಥಿತಿಯನ್ನು ಕೇಂದ್ರದ ಕಾನೂನು ಸಚಿವರಿಗೆ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು. ಕಾವೇರಿ ನೀರು ಹಂಚಿಕೆ ಸಂಬಂಧ ಸಂಕಷ್ಟ ಸಂದರ್ಭಕ್ಕೆ ಅನ್ವಯವಾಗುವ ಸೂತ್ರ ಇಲ್ಲದಿರುವುದು ತೊಡಕಾಗಿದೆ. ನೀರು ಹರಿಸಲು ಅಸಾಧ್ಯವಾದ ಪರಿಸ್ಥಿತಿ ಇರುವುದರಿಂದ ಸುಪ್ರೀಂಕೋರ್ಟ್ ಮೊರೆ ಹೋಗದೆ ಬೇರೆ ದಾರಿ ಇಲ್ಲ ಎಂದರು.
ನಾಡಿನ ನೆಲ, ಜಲದ ವಿಷಯಗಳು ಬಂದಾಗ ವಿಪಕ್ಷಗಳೂ ಸೇರಿದಂತೆ ನಾವೆಲ್ಲರೂ ಸೇರಿ ಸಂಘಟಿತ ಪ್ರಯತ್ನ ಮಾಡಬೇಕಾಗುತ್ತದೆ. ಈ ವಿಷಯದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ. ನೆಲ, ಜಲದ ವಿಷಯ ಬಂದಾಗ ತಮಿಳುನಾಡಿನವರು ಹೇಗೆ ಒಗ್ಗಟ್ಟಾಗಿ ಧ್ವನಿ ಎತ್ತುತ್ತಾರೋ ನಾವು ಕೂಡ ಅದೇ ತರಹ ಮಾಡಬೇಕು. ಆದರೆ ನಮ್ಮಲ್ಲಿ ಇದಕ್ಕೆ ಸಂಬಂಧಿಸಿದಂತೆ ಎಲ್ಲೋ ಸ್ವಲ್ಪ ಅಪವಾದ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.