ಕರ್ನಾಟಕ

karnataka

ETV Bharat / state

ಮೆಕ್ಕೆಜೋಳ ಖರೀದಿ.. ಬೆಂಬಲ ಬೆಲೆ ನೀಡಲು ತೀರ್ಮಾನ, ಹಾಲಿನ ದರ ಏರಿಕೆ ಇಲ್ಲ- ಸಚಿವ ಕೆ ವೆಂಕಟೇಶ್ - ಹಾಲಿನ ದರ ಏರಿಕೆ ತೀರ್ಮಾನ

ರೈತರ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್​ಗೆ 160 ರೂ. ನಂತೆ ಬೆಂಬಲ ನೀಡಿ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶ್ ಅವರು ತಿಳಿಸಿದ್ದಾರೆ.

ಸಚಿವ ಕೆ ವೆಂಕಟೇಶ್
ಸಚಿವ ಕೆ ವೆಂಕಟೇಶ್

By ETV Bharat Karnataka Team

Published : Nov 10, 2023, 6:03 PM IST

ಸಚಿವ ಕೆ ವೆಂಕಟೇಶ್

ಬೆಂಗಳೂರು : ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಪಶು ಆಹಾರ ಘಟಕಗಳ ಮೂಲಕ ಪಶು ಆಹಾರ ತಯಾರಿಕೆಗಾಗಿ ಒಂದು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಬೆಂಬಲ ಬೆಲೆ ಮೂಲಕ 160 ರೂ. ನಂತೆ ಉತ್ತೇಜನ ದರ ನೀಡಿ ಪ್ರತಿ ಕ್ವಿಂಟಾಲ್​ಗೆ 2250 ರೂ. ನಂತೆ ಖರೀದಿಸಲು ಉದ್ದೇಶಿಸಲಾಗಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶ್ ಅವರು ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಆರ್ಥಿಕ ಇಲಾಖೆಯು ಕೆ.ಟಿ.ಪಿ.ಪಿ. ಕಾಯ್ದೆ 4ಜಿ ಅಡಿಯಲ್ಲಿ ವಿನಾಯಿತಿ ನೀಡಲಾಗಿದ್ದು, ಇದರಿಂದ ರಾಜ್ಯದಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಖರೀದಿಸುವುದರಿಂದ ರೈತರಿಗೆ ಹೆಚ್ಚಿನ ಬೆಲೆ ದೊರಕಿದಂತಾಗುತ್ತದೆ ಎಂದರು.

ಮೊದಲಿಗೆ ರಾಜ್ಯ ಸರ್ಕಾರದ ಕೃಷಿ ಇಲಾಖೆಯಡಿ ಬರುವ "FRUITS" ತಂತ್ರಾಂಶದಲ್ಲಿ ನೋಂದಣಿಯಾಗಿರುವ ಸಂಸ್ಥೆಯೊಂದಿಗೆ ಹಾಲಿನ ಸಂಘಕ್ಕೆ ಭೇಟಿ ನೀಡಿ ಮಕ್ಕೆಜೋಳ ಸರಬರಾಜು ಮಾಡಲು ನೋಂದಾಯಿಸಿ ಸ್ವೀಕೃತಿ ಪತ್ರ ಪಡೆಯಬೇಕು. “FRUITS” ನೋಂದಣಿಯನ್ನು ಪಡೆಯಲು ತಾಂತ್ರಿಕ ತೊಂದರೆ ಉಂಟಾದಲ್ಲಿ ಹತ್ತಿರದ ರೈತ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಮೆಕ್ಕೆಜೋಳ ಖರೀದಿಗಾಗಿ ನೋಂದಣಿ ಪ್ರಕ್ರಿಯೆಯನ್ನು ನವೆಂಬರ್ 13 ರಿಂದ ಪ್ರಾರಂಭಿಸಲಾಗುವುದು. ನೋಂದಣಿ ನಂತರ ನೋಂದಣಿ ದೃಢೀಕರಣದೊಂದಿಗೆ ರೈತರು ಬೆಳೆದಿರುವ ಮೆಕ್ಕೆಜೋಳದ ಮಾದರಿಯನ್ನು ಹಾಲು ಒಕ್ಕೂಟಗಳ ಮೂಲಕ ಪಶು ಆಹಾರ ಘಟಕಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಕೆಎಂಎಫ್ ಬೆಂಗಳೂರಿನ ರಾಜಾನಕುಂಟೆ, ತುಮಕೂರಿನ ಗುಬ್ಬಿ, ಧಾರವಾಡ, ಹಾಸನ ಹಾಗೂ ಶಿಕಾರಿಪುರದಲ್ಲಿ ಪಶು ಆಹಾರ ಘಟಕಗಳನ್ನು ಹೊಂದಿದೆ. ರೈತರು ಹಾಲು ಮಹಾಮಂಡಳಿ ಆರಂಭಿಸುವ ಖರೀದಿ ಕೇಂದ್ರದಲ್ಲೇ ಮೆಕ್ಕೆಜೋಳವನ್ನು ಮಾರಾಟ ಮಾಡಬೇಕು ಎಂದು ತಿಳಿಸಿದರು.

ಪ್ರಸ್ತುತ ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇರುವುದರಿಂದ ಶೇ. 40ರಷ್ಟು ಮೆಕ್ಕೆಜೋಳದ ಇಳುವರಿಯನ್ನು ಮಾತ್ರ ನಿರೀಕ್ಷಿಸಬಹುದಾಗಿದ್ದು, ಪ್ರಸ್ತುತ ರಾಜ್ಯದಲ್ಲಿನ ಕೃಷಿ ಮಾರಾಟ ವಾಹಿನಿ ದರಗಳನ್ನು ಪರಿಶೀಲಿಸಲಾಗಿದ್ದು, ದರಗಳು ಪ್ರತಿ ಕ್ವಿಂಟಾಲ್​ಗೆ 2150- 2250 ರೂ. ಇದೆ. ಹಾಗಾಗಿ, ರೈತರಿಗೆ ಉತ್ತೇಜನ ನೀಡಲು ಎಂಎಸ್​ಪಿ ಮೂಲ ದರಗಳಿಗೆ ಪ್ರತಿ ಕ್ವಿಂಟಾಲ್‌ಗೆ 160 ರೂ. ನಂತೆ ಉತ್ತೇಜನ ಬೆಲೆ ನೀಡಲು ತೀರ್ಮಾನಿಸಿದ್ದು, ದರ ಪ್ರತಿ ಕ್ವಿಂಟಾಲ್ 2250 ರೂ. (ಮೂಲ ಬೆಲೆ, ಸಾಗಾಣಿಕೆ ವೆಚ್ಚ, ಚೀಲದ ಬೆಲೆ ಮತ್ತು ಉತ್ತೇಜನ ದರ ಸೇರಿಸಿ)ದಂತೆ ನಿಗದಿಪಡಿಸಿ ರೈತರಿಂದ ನೇರವಾಗಿ ಮೆಕ್ಕೆ ಜೋಳ ಖರೀದಿಸಲು ಈಗಾಗಲೇ ರಾಜ್ಯ ಸರ್ಕಾರದಿಂದ ಕೆಟಿಪಿಪಿ ಕಾಯಿದೆ 4 ಜಿ ಅಡಿ ವಿನಾಯಿತಿ ಪಡೆಯಲಾಗಿದೆ ಎಂದು ಹೇಳಿದರು.

ರೈತರು ಸರಬರಾಜು ಮಾಡಿ ಸ್ವೀಕೃತವಾದ ಪರಿಮಾಣಕ್ಕೆ ಅನುಗುಣವಾಗಿ ನಿಗದಿಪಡಿಸಿರುವ ದರದಂತೆ ಮೊತ್ತವನ್ನು ಡಿ.ಬಿ.ಟಿ ಮೂಲಕ 20 ದಿನಗಳ ಒಳಗಾಗಿ ನೇರವಾಗಿ ಬ್ಯಾಂಕ್‌ ಉಳಿತಾಯ ಖಾತೆಗೆ ಜಮಾ ಮಾಡುವುದರಿಂದ ರೈತರ ವಿವರವನ್ನೊಳಗೊಂಡ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್‌ ಉಳಿತಾಯ ಖಾತೆ ಸಂಖ್ಯೆ ಸೀಡಿಂಗ್ ಆಗಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು. ರೈತರಿಂದ ಮೆಕ್ಕೆಜೋಳ ನೇರ ಖರೀದಿ ಪ್ರಕ್ರಿಯೆಯು ಅವಶ್ಯಕತೆಗನುಗುಣವಾಗಿ ಮುಂದುವರೆಸುವ ಉದ್ದೇಶವಿದ್ದು, ರೈತರು ಸಹಕರಿಸಿ, ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.

ಸದ್ಯಕ್ಕೆ ಹಾಲಿನ ದರ ಏರಿಕೆ ಇಲ್ಲ : ರಾಜ್ಯದಲ್ಲಿ ಸದ್ಯಕ್ಕೆ ಹಾಲಿನ ದರ ಏರಿಕೆ ಮಾಡುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ. ಇಂದಿನ ಸಭೆಯಲ್ಲಿ ಹಾಲು ಒಕ್ಕೂಟದವರು ನಮಗೆ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ನಮಗೆ ರೈತರು, ಗ್ರಾಹಕರ ಹಿತ ಮುಖ್ಯ. ಹಾಗಾಗಿ ಹಾಲಿನ ದರ ಏರಿಕೆ ತೀರ್ಮಾನ ಮಾಡಿಲ್ಲ ಎಂದು ಹೇಳಿದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಆದರೂ ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ಹಾಲಿನ ದರ ಏರಿಕೆ ಮಾಡುವ ಚಿಂತನೆ ಇಲ್ಲ ಎಂದ ಸಚಿವರು, ರಾಜ್ಯದಲ್ಲಿ ಹಾಲಿನ ಕೊರತೆ ಇಲ್ಲ. ಸಾಕಷ್ಟು ಹಾಲು ಉತ್ಪಾದನೆಯಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿದರು. ಮುಂದಿನ ಲೋಕಸಭಾ ಚುನಾವಣೆಗೆ ನಾನು ಅಭ್ಯರ್ಥಿ ಅಲ್ಲ. ಸುಮ್ಮನೆ ಸುದ್ದಿಗಳನ್ನು ಹುಟ್ಟು ಹಾಕುವುದು ಬೇಡ ಎಂದರು. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ, ಶಾಸಕ ಭೀಮಾ ನಾಯಕ್ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಮೆಕ್ಕೆಜೋಳ ಖರೀದಿದಾರರಿಂದ ವಂಚನೆ: ರೈತರಿಗೆ ಹಣ ವಾಪಸ್ ಕೊಡಿಸಿದ ಎಸ್​ಪಿ ರಿಷ್ಯಂತ್

ABOUT THE AUTHOR

...view details