ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಕೋವಿಡ್ ಪರೀಕ್ಷೆ ಹಾಗೂ ಚಿಕಿತ್ಸೆಗೋಸ್ಕರ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಪಡೆದರೆ ಆಸ್ಪತ್ರೆ ಪರವಾನಿಗೆ ರದ್ದುಗೊಳಿಸಿ, ಕಾನೂನು ಕ್ರಮ ಜರುಗಿಸುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಎಚ್ಚರಿಕೆ ನೀಡಿದ್ದಾರೆ.
ಮಹದೇವಪುರ ವಲಯ ಕೋವಿಡ್ ಉಸ್ತುವಾರಿಯನ್ನು ನಗರಾಭಿವೃದ್ಧಿ ಸಚಿವರಿಗೆ ವಹಿಸಿರುವ ಕಾರಣ ವೈಟ್ ಫೀಲ್ಡ್ ಖಾಸಗಿ ಹೋಟೆಲ್ನಲ್ಲಿ ಶಾಸಕ ಅರವಿಂದ ಲಿಂಬಾವಳಿ, ಮಹದೇವಪುರ ವಲಯ ಬಿಬಿಎಂಪಿ ಪಾಲಿಕೆ ಸದಸ್ಯರು, ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆ ನಡೆಸಿದ ಬೈರತಿ ಬಸವರಾಜ್ ಕೋವಿಡ್ ನಿಯಂತ್ರಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಪ್ರಮುಖವಾಗಿ ಬೆಂಗಳೂರು ಪೂರ್ವ ತಾಲೂಕು ವ್ಯಾಪ್ತಿಯಲ್ಲಿ 11 ಗ್ರಾಮ ಪಂಚಾಯತಿ ಹಾಗೂ 17 ಬಿಬಿಎಂಪಿ ವಾರ್ಡ್ಗಳಿದ್ದು, ಕೋವಿಡ್ ನಿರ್ವಹಣೆ ಘಟಕ ಸ್ಥಾಪನೆ ಮಾಡಿ ಒಬ್ಬ ನೂಡಲ್ ಅಧಿಕಾರಿಯನ್ನು ನೇಮಿಸಿ, ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಪ್ರತಿದಿನ ಕೊರೊನಾ ಪ್ರಕರಣಗಳ ಮಾಹಿತಿ ಕಲೆ ಹಾಕಿ ಅದರ ನಿರ್ವಹಣೆ ಜವಾಬ್ದಾರಿ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಮಹದೇವಪುರ ವಲಯ ವ್ಯಾಪ್ತಿಗೆ ಒಂದು ಸಹಾಯವಾಣಿ ಕೇಂದ್ರ ತೆರೆದು ಪ್ರತಿ ವಾರ್ಡ್ಗೆ ಎರಡು ಹಾಗೂ ಪಂಚಾಯತಿಗೆ ಒಂದು ಅಂಬ್ಯುಲೆನ್ಸ್ ನಿಗದಿ ಪಡಿಸಲಾಗಿದೆ. ಪ್ರತಿವಾರ್ಡ್ಗೆ ಪೊಲೀಸ್ ಇಲಾಖೆ ವತಿಯಿಂದ ವಾರ್ಡ್ ವಾಚ್ ಕಮಿಟಿ ನೇಮಕ, ಪೂರ್ವ ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಕೋವಿಡ್ ಚಿಕಿತ್ಸಾ ಕೇಂದ್ರ ಸ್ಥಾಪನೆ ಸೇರಿದಂತೆ ಇನ್ನು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.