ಬೆಂಗಳೂರು: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಬಿ. ಸಿ ನಾಗೇಶ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಮೊಟ್ಟೆ ಕೊಡೋದು ಬೇಡ ಎಂಬ ಶಿಫಾರಸಿಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೆ 7 ಜಿಲ್ಲೆಗಳಿಗೆ ಸೀಮಿತವಾದ ಯೋಜನೆಯನ್ನ ಸರ್ಕಾರ ರಾಜ್ಯಾದ್ಯಂತ ವಿಸ್ತರಿಸಿದೆ. 1 ರಿಂದ 8 ನೇ ಕ್ಲಾಸ್ ಮಕ್ಕಳಿಗೆ ಊಟದ ಜತೆ ಮೊಟ್ಟೆ ವಿತರಿಸಲು ನಿರ್ಧರಿಸಲಾಗಿದೆ. ಯಾರು ಮೊಟ್ಟೆ ತಿನ್ನಲು ಇಚ್ಛೆ ಪಡುತ್ತಾರೆ, ಆ ವಿದ್ಯಾರ್ಥಿಗಳಿಗೆ ಮಾತ್ರ ಮೊಟ್ಟೆ ನೀಡಲಾಗುವುದು. ಯಾರಿಗೂ ಬಲವಂತವಾಗಿ ಮೊಟ್ಟೆ ತಿನ್ನಿಸುವ ಹಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಅದರ ಜೊತೆಗೆ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಪೌಷ್ಠಿಕಯುಕ್ತ ಚಿಕ್ಕಿ ಅಥವಾ ಬಾಳೆ ಹಣ್ಣನ್ನು ವಿತರಿಸಲು ತೀರ್ಮಾನಿಸಲಾಗಿದೆ. ಯಾವುದೇ ಶಿಕ್ಷಕರು ಮಕ್ಕಳಿಗೆ ಮೊಟ್ಟೆ ತಿನ್ನುವಂತೆ ಬಲವಂತ ಮಾಡಬಾರದು. ಇದಕ್ಕಾಗಿ ಸುಮಾರು 200 ಕೋಟಿ ರೂ. ವೆಚ್ಚವಾಗಬಹುದು ಎಂದು ಸ್ಪಷ್ಟಪಡಿಸಿದರು.