ಬೆಂಗಳೂರು: ಕೊರೊನಾ ಪರಿಸ್ಥಿತಿ ನಿರ್ವಹಣೆ ಸಂಬಂಧ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಯಿತು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಹೆಚ್.ಎಂ.ರೇವಣ್ಣ, ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಭಾಗವಹಿಸಿದ್ದರು.
ಕೊರೊನಾ ವಿರುದ್ಧ ಕಾಂಗ್ರೆಸ್ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಡಿಕೆಶಿ ಕೊರೊನಾ ಕುರಿತ ಕಾಂಗ್ರೆಸ್ ಕಾರ್ಯಪಡೆ ಅಧ್ಯಕ್ಷ ರಮೇಶ್ ಕುಮಾರ್ ಕೂಡ ಇದ್ದರು. ಇಂದು ಮಧ್ಯಾಹ್ನ ನಡೆದ ಕೊರೊನಾ ಕುರಿತ ಕಾಂಗ್ರೆಸ್ ಕಾರ್ಯಪಡೆ ಸಭೆಯಲ್ಲಿ ಕೈಗೊಂಡ ನಿರ್ಣಯ ಹಾಗೂ ನಡೆದ ಚರ್ಚೆಯ ಕುರಿತು ಡಿಕೆಶಿ ಹಿರಿಯ ನಾಯಕರಿಗೆ ವಿವರಿಸಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ಮುಂಜಾಗ್ರತೆಯ ಮಾಹಿತಿ ನೀಡಿದರು. ಕಾಂಗ್ರೆಸ್ ಪಕ್ಷ ಎನ್ಎಸ್ಯುಐ ಮೂಲಕ ನಡೆಸುತ್ತಿರುವ ರಕ್ತದಾನ ಶಿಬಿರ, ಕಾಂಗ್ರೆಸ್ ಶಾಸಕರಿಂದ ಸಂಗ್ರಹವಾಗುತ್ತಿರುವ ಪರಿಹಾರಧನ, ಕಾಂಗ್ರೆಸ್ ಮುಖಂಡರಿಗೆ ರೈತರಿಂದ ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸಿ ಬಡವರಿಗೆ ಹಾಗೂ ಕಾರ್ಮಿಕರಿಗೆ ವಿತರಿಸುವಂತೆ ಸೂಚಿಸಿರುವ ಆದೇಶದ ಪಾಲನೆ, ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಕುರಿತು ಸರ್ಕಾರದ ಗಮನ ಸೆಳೆಯುತ್ತಿರುವ ವಿವರವನ್ನು ಡಿಕೆಶಿ ಸಭೆಗೆ ಒಪ್ಪಿಸಿದರು.
ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯನಿರ್ವಹಣೆ ಇದೇ ರೀತಿ ಮುಂದುವರಿಯಲು ತಮ್ಮೆಲ್ಲರ ಸಹಕಾರ ಬೇಕು ಎಂದು ಹಿರಿಯ ನಾಯಕರನ್ನು ಕೋರಿದರು. ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ನಾಯಕರು ಇದಕ್ಕೆ ಸಮ್ಮತಿ ಸೂಚಿಸಿದರು.