ಬೆಂಗಳೂರು: ಕಾರ್ಗೋ ಕ್ಷೇತ್ರಕ್ಕೆ ಆತುರದಿಂದ ಪ್ರವೇಶ ಮಾಡಿಲ್ಲ. ಅಗತ್ಯ ಅಧ್ಯಯನ ನಡೆಸಿ ಬೇಡಿಕೆ ಪ್ರಮಾಣ ಪರಿಗಣಿಸಿಯೇ ನಾವು ಕಾರ್ಗೋ ಕ್ಷೇತ್ರಕ್ಕೆ ಕಾಲಿಟ್ಟಿದ್ದೇವೆ. ನಮ್ಮದು ವಿಶ್ವಾಸಾರ್ಹ ಹಾಗೂ ಸಂಪೂರ್ಣ ಸುರಕ್ಷತೆಯ ಸೇವೆಯಾಗಿದ್ದು ಹೊಸದಾಗಿ ಪರಿಚಯಿಸಿರುವ ಕಾರ್ಗೋ ಕ್ಷೇತ್ರದಲ್ಲಿಯೂ ನಾವು ಸಂಪೂರ್ಣ ಯಶಸ್ವಿ ಆಗುತ್ತೇವೆ ಎಂದು ಕೆಎಸ್ಆರ್‌ಟಿಸಿ ವಿಶ್ವಾಸ ವ್ಯಕ್ತಪಡಿಸಿದೆ.
ಈಗಾಗಲೇ ಬಸ್ಗಳಲ್ಲಿ ಸಣ್ಣ ಪ್ರಮಾಣದ ಸರಕನ್ನು ಕೆಎಸ್ಆರ್‌ಟಿಸಿ ಸಾಗಾಣಿಕೆ ಮಾಡುತ್ತಿತ್ತು. ಇದರಿಂದಾಗಿಯೇ ವಾರ್ಷಿಕ 25 ಕೋಟಿ ರೂ.ಗಳ ಗಳಿಕೆ ಮಾಡುತ್ತಿತ್ತು. ಇದೀಗ ಕಾರ್ಗೋ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಾಗಿರುವುದನ್ನು ಮನಗಂಡು ಪ್ರತ್ಯೇಕವಾಗಿ ಟ್ರಕ್ಗಳನ್ನು ಖರೀದಿಸಿ ಸರಕು ಸಾಗಾಣಿಕ ಪ್ರಾರಂಭಿಸಿದೆ. ಆದರೂ ಏಕಾಏಕಿ ಈ ಕ್ಷೇತ್ರಕ್ಕೆ ಕಾಲಿಟ್ಟು ಕೈ ಸುಟ್ಟುಕೊಳ್ಳಬಾರದು ಎನ್ನುವ ಕಾರಣಕ್ಕೆ ಕಾರ್ಗೋ ಸೇವೆ ಕುರಿತು ಅಧ್ಯಯನ ನಡೆಸಲಾಯಿತು.
ಶಿವಮೊಗ್ಗದ ಎಂಬಿಎ ಕಾಲೇಜಿನ ವಿದ್ಯಾರ್ಥಿಗಳ ತಂಡ ರಚಿಸಿದ ಕೆಎಸ್ಆರ್‌ಟಿಸಿ ಕಾರ್ಗೋ ಕ್ಷೇತ್ರದ ಬೇಡಿಕೆ ಕುರಿತು ಅಧ್ಯಯನ ನಡೆಸುವಂತೆ ಸೂಚಿಸಿತ್ತು. ಅದರಂತೆ ಅಧ್ಯಯನ ನಡೆಸಿದ್ದ ವಿದ್ಯಾರ್ಥಿಗಳ ತಂಡ ಅಧ್ಯಯನ ವರದಿಯನ್ನು ಕೆಎಸ್ಆರ್ಟಿಸಿಗೆ ನೀಡಿದೆ. ಅದರಲ್ಲಿ ಬೇಡಿಕೆ ಬಗ್ಗೆ ಸ್ಪಷ್ಟತೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಕೆಎಸ್ಆರ್‌ಟಿಸಿ ಕಾರ್ಗೋ ಸೇವೆಗೆ ಬೇಡಿಕೆ ಇದೆ. ಹೆಚ್ಚು ಬೇಡಿಕೆ ಇರುವ ಐದಾರು ಜಿಲ್ಲೆಗಳಲ್ಲಿ ಮೊದಲು ಆರಂಭಿಸಿ ಹಂತ ಹಂತವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಕೆಎಸ್ಆರ್‌ಟಿಸಿ ಕಾರ್ಗೋ ಸೇವೆ ಒದಗಿಸಲು ಟ್ರಕ್ಗಳನ್ನು ಬಳಸಿಕೊಳ್ಳಬಹುದು ಎನ್ನುವ ವರದಿಯನ್ನು ವಿದ್ಯಾರ್ಥಿಗಳು ನೀಡಿದ್ದರು.
ಕಾರ್ಗೋ ಸೇವೆ ಕುರಿತು ವಿದ್ಯಾರ್ಥಿಗಳ ತಂಡ ನಡೆಸಿದ ಅಧ್ಯಯನದಲ್ಲಿ ಸಕಾರಾತ್ಮಕ ವರದಿ ಬಂದ ಹಿನ್ನಲೆಯಲ್ಲಿ ತಕ್ಷಣವೇ ಟ್ರಕ್ಗಳ ಖರೀದಿಗೆ ಮುಂದಾದ ಕೆಎಸ್ಆರ್‌ಟಿಸಿ ಅಧಿಕಾರಿಗಳು, ಕೆಎಸ್ಆರ್‌ಟಿಸಿ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದುಕೊಂಡು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಒಪ್ಪಿಗೆ ಪಡೆದು ಆಡಳಿತಾತ್ಮಕ ಅನುಮೋದನೆಯ ನಂತರ ಪುಣೆಯ ಟಾಟಾ ಘಟಕದಿಂದ 20 ಟ್ರಕ್ಗಳ ಪೂರೈಕೆಗೆ ಒಡಂಡಿಕೆ ಮಾಡಿಕೊಳ್ಳಲಾಯಿತು. ಅದರಂತೆ 20 ಟ್ರಕ್ ಗಳ ಪೂರೈಕೆಯೂ ಆಗಿದ್ದು, ಅಧಿಕೃತವಾಗಿ ಮೊದಲ ಹಂತದ ಕಾರ್ಗೋ ಸೇವೆಯನ್ನು ಕೆಎಸ್ಆರ್‌ಟಿಸಿ ಆರಂಭಿಸಿದೆ.