ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕು ಕಾಲಿಟ್ಟು ಎರಡು ವರ್ಷಗಳು ಕಳೆದಿವೆ. ಇಂದಿಗೂ ಈ ಕಣ್ಣಿಗೆ ಕಾಣದ ವೈರಸ್ನ ಕುರಿತು ಆತಂಕ ಕಡಿಮೆ ಆಗಿಲ್ಲ. ವೈರಸ್ ನಿಯಂತ್ರಣಕ್ಕೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಹಲವು ತಂತ್ರಗಳನ್ನ ಹೂಡಿದರೂ ಸಂಪೂರ್ಣ ಹೋಗಲಾಡಿಸಲು ಆಗಲಿಲ್ಲ. ಇತ್ತ ಕೊರೊನಾ ಹರಡುವಿಕೆಯನ್ನ ತಪ್ಪಿಸಲು ಆಗದೇ ಇದ್ದರೂ ಸೋಂಕಿನ ತೀವ್ರತೆ ಕಡಿಮೆ ಮಾಡಲು ಕೊರೊನಾ ಲಸಿಕೆ ನೀಡಲಾಗುತ್ತಿದೆ.
ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಪ್ರದೀಪ್ ರಂಗಪ್ಪ ಮಾಹಿತಿ ಕೋವಿಡ್ ಲಸಿಕೆ ಬಂದು ವರ್ಷವಾಗಿದೆ. ಈ ಮಧ್ಯೆ ಹೊಸ ರೂಪಾಂತರಿ ಒಮಿಕ್ರಾನ್ ನಿಂದ ಬಚಾವ್ ಆಗಲು ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಆದ್ರೆ ಕೋವಿಡ್ ಮೊದಲ ಡೋಸ್ ಪಡೆದ ಹಲವರು, ಎರಡನೇ ಡೋಸ್ ಪಡೆಯುವುದನ್ನ ಮರೆತಿದ್ದಾರೆ. ನಿಗದಿತ ಸಮಯ ಮೀರಿ ಹೋದರೂ ಕೆಲವರು ಲಸಿಕೆಯನ್ನ ಪಡೆಯದೇ ಇರುವುದು ಕಂಡುಬಂದಿದೆ. ಹೀಗೆ ಮೊದಲ ಡೋಸ್ ಪಡೆದ ಮೇಲೆ ನಿಗದಿತ ಸಮಯದೊಳಗೆ ಲಸಿಕೆ ಪಡೆಯದಿದ್ದರೆ ಏನು ಆಗುತ್ತೆ? ಸಮಯ ಮೀರಿದ ಮೇಲೆ ಲಸಿಕೆಯನ್ನ ಪಡೆಯಬಹುದಾ? ಎಂಬುದರ ಕುರಿತು ತಜ್ಞರು ಮಾಹಿತಿಯನ್ನ ನೀಡಿದ್ದಾರೆ.
ಈ ಕುರಿತು ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಪ್ರದೀಪ್ ರಂಗಪ್ಪ ಮಾತಾನಾಡಿದ್ದು, ಇತ್ತೀಚೆಗೆ ಬಹಳಷ್ಟು ಜನರು ಎರಡನೇ ಡೋಸ್ ವ್ಯಾಕ್ಸಿನ್ ಪಡೆಯೋದು ತಡವಾಗಿದೆ. ಆದರೆ ವ್ಯಾಕ್ಸಿನ್ ಪಡೆಯೋದು ಮರೆತು ಹೋಗಿದ್ದರು, ತಡವಾಗಿದ್ದರೂ ಸಹ ಎರಡನೇ ಡೋಸ್ ಪಡೆಯುವುದು ಒಳ್ಳೆಯದು. ಯಾಕೆಂದರೆ ಸಾಕಷ್ಟು ಸೋಂಕಿತರನ್ನ ಐಸಿಯುನಲ್ಲಿ ನೋಡಿದಾಗ ಒಂದು ಡೋಸ್ ಪಡೆದಿದ್ದರೂ ರೋಗದ ತೀವ್ರತೆ ಹೆಚ್ಚಾಗಿ ಕಂಡುಬರುತ್ತೆ. ಹೀಗಾಗಿ ಎರಡನೇ ಡೋಸ್ ವ್ಯಾಕ್ಸಿನ್ ತೆಗೆದುಕೊಳ್ಳಿ ಅಂತ ಸಲಹೆ ನೀಡಿದರು.
ವ್ಯಾಕ್ಸಿನ್ ತೆಗೆದುಕೊಳ್ಳುವುದನ್ನ ತಡಮಾಡದೇ, ಒಂದು ವೇಳೆ ಮರೆತು ಹೋಗಿದ್ದರೂ ಎರಡನೇ ಡೋಸ್ ಹಾಕಿಸಿಕೊಳ್ಳಿ. ಇದು ಬೂಸ್ಟರ್ ಡೋಸ್ ತರಹ ಕೆಲಸ ಮಾಡುತ್ತೆ. ಸೋಂಕು ಹರಡುವಿಕೆಯನ್ನ ತಡೆಗಟ್ಟಲು ಆಗದೇ ಇದ್ದರು ಸಹ ರೋಗದ ತೀವ್ರತೆಯನ್ನ ಕಡಿಮೆ ಮಾಡಬಹುದು. ಆಸ್ಪತ್ರೆಗೆ ದಾಖಲು ಆಗುವುದನ್ನ, ಐಸಿಯು, ವೆಂಟಿಲೇಟರ್ ಮೊರೆ ಹೋಗುವುದನ್ನ ತಪ್ಪಿಸಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ