ಬೆಂಗಳೂರು:ಕುಡಿದ ನಶೆಯಲ್ಲಿ ಪತ್ನಿಯನ್ನು ಕೊಲೆಗೈದು ಸ್ಟ್ರೋಕ್ದಿಂದ ಸಾವನ್ನಪ್ಪಿದ್ದಾಳೆಂದು ನಾಟಕವಾಡಿದ್ದ ಪತಿರಾಯನ ಅಸಲಿ ಬಣ್ಣ ಬಯಲಾಗಿದೆ. ಆರೋಪಿಯನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬಿಟಿಎಂ 2ನೇ ಹಂತದ ನಿವಾಸಿ ಅಜಿತ್ ತನ್ನ ಪತ್ನಿ ಸಾನಿಯಾಳನ್ನು ಕೊಲೆಗೈದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಎರಡು ವರ್ಷಗಳ ಹಿಂದೆ ಅಜಿತ್ ಹಾಗೂ ಸಾನಿಯಾ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಇಬ್ಬರು ಅನ್ಯೋನ್ಯವಾಗಿದ್ದರು. ಆದರೆ ಕೆಲ ತಿಂಗಳಿನಿಂದ ಆರೋಪಿ ಕುಡಿದು ಬಂದು ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ.
ಕಳೆದ ತಿಂಗಳು ಮೇ 29ರಂದು ಸಹ ದಂಪತಿ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಮನೆಯಲ್ಲಿದ್ದ ದೊಣ್ಣೆಯಿಂದ ಸಾನಿಯಾ ತಲೆಗೆ ಬಲವಾಗಿ ಹೊಡೆದು ಅಜಿತ್ ಮಾರಣಾಂತಿಕ ಹಲ್ಲೆ ನಡೆಸಿದ್ದ. ತೀವ್ರ ಗಾಯಗೊಂಡು ಕುಸಿದು ಬಿದ್ದ ಪತ್ನಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾನೆ. ಆದರೆ ಸಾನಿಯಾ ಸಾವನ್ನಪ್ಪಿದ್ದಾಳೆ. ಆಕೆ ಸ್ಟ್ರೋಕ್ ಆಗಿ ಸಾವನ್ನಪ್ಪಿದ್ದಾಳೆ ಎಂದು ಪತ್ನಿಯ ಮನೆಯವರಿಗೆ ತಿಳಿಸಿದ್ದಾನೆ.
ಸ್ಥಳಕ್ಕೆ ಬಂದ ಆಕೆಯ ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೈಕೋ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಪರಿಶೀಲಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ವೈದ್ಯರು ಮರಣೋತ್ತರ ಪರೀಕ್ಷೆಯಲ್ಲಿ ಬಲವಾಗಿ ಹೊಡೆದಿದ್ದರಿಂದ ಸಾನಿಯಾ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಸಂಗತಿ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.