ಬೆಂಗಳೂರು:ರಾಮಮೂರ್ತಿನಗರ ಪೊಲೀಸರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಜಾರ್ಖಂಡ್ ಮೂಲದ ವ್ಯಕ್ತಿಯನ್ನು ವಿಚಾರಣೆಗೆ ಕರೆತಂದಿದ್ದು, ಬಳಿಕ ಆತ ಶವವಾಗಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ತಿಂಗಳ 23ರಂದು ಮಕ್ಕಳ ಕಳ್ಳ ಎಂದು ವ್ಯಕ್ತಿಯನ್ನು ಸಾರ್ವಜನಿಕರು ಥಳಿಸಿ ರಾಮಮೂರ್ತಿನಗರ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಆ ವ್ಯಕ್ತಿಯನ್ನ ಹೊಯ್ಸಳ ವಾಹನದಲ್ಲಿ ಕರೆದೊಯ್ದಿರುವ ವಿಡಿಯೋ ಕೂಡ ಸಾರ್ವಜನಿಕರ ಮೊಬೈಲ್ನಲ್ಲಿ ಸೆರೆಯಾಗಿದೆ. ಇದಾದ ಮಾರನೇ ದಿನ ಆ ವ್ಯಕ್ತಿ ಕೆಆರ್ ಪುರದ ಐಟಿಐ ಕಾಲೋನಿ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಅಪರಿಚಿತ ಶವ ದೊರೆತಿದ್ದರಿಂದ ಕೆ ಆರ್ ಪುರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ಗುರುತು ಪತ್ತೆಯಾಗಿಲ್ಲ ಎಂದು ಕೈ ತೊಳೆದುಕೊಂಡಿದ್ದರು. ಹೀಗಾಗಿ ರಾಮಮೂರ್ತಿನಗರ ಪೊಲೀಸರ ಮೇಲೆ ಲಾಕಪ್ ಡೆತ್ ಆರೋಪ ಕೇಳಿ ಬಂದಿದೆ.