ಬೆಂಗಳೂರು:ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮೇಲೆ ರಾಜಕೀಯ ದುರುದ್ದೇಶದಿಂದ ಐಎನ್‌ಎಕ್ಸ್ ಮೀಡಿಯಾ ಹಗರಣ ಪ್ರಕರಣ ದಾಖಲಿಸಲಾಗಿತ್ತು. ಕೊನೆಗೂ ಸುಪ್ರೀಂಕೋರ್ಟ್ ತೀರ್ಪಿನಿಂದ ಅವರಿಗೆ ಗೆಲುವು ಸಿಕ್ಕಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂ ತೀರ್ಪು ತಡವಾಗಿ ಬಂದರೂ, ಅದನ್ನು ನಾನು ಸ್ವಾಗತಿಸುತ್ತೇನೆ. ಕಾನೂನು ಅಡಿಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡಲಿ. ಅದನ್ನ ಬಿಟ್ಟು ಬೇಕಂತಲೇ ಪ್ರಕರಣ ದಾಖಲಿಸೋದು ಬೇಡ. ಕೋರ್ಟ್ ತೀರ್ಪು ನೀಡಿದೆ, ಆದ್ರೆ ಬಹಳ ವಿಳಂಬವಾಗಿದೆ. ಮೂರು ತಿಂಗಳಿಂದ ಜೈಲುವಾಸ ಮಾಡಬೇಕಾಗಿ ಬಂತು. ಚಿದಂಬರಂ ಓರ್ವ ಆರ್ಥಿಕ ತಜ್ಞ, ರಾಜಕೀಯ ಧುರಿಣ ಮತ್ತು ಕಾನೂನು ತಜ್ಞ ಆಗಿದ್ದಾರೆ. ಸಾಕ್ಷ್ಯಗಳನ್ನ ಅವರೇನೂ ನಾಶ ಮಾಡಲ್ಲ, ಚಿದಂಬರಂ ಉತ್ತಮ ವ್ಯಕ್ತಿತ್ವ ಹೊಂದಿದವರು ಅಂತಾ ಕೋರ್ಟ್ ಹೇಳಿದೆ ಎಂದು ಸುಪ್ರೀಂಕೋರ್ಟ್ನಿಂದ ಷರತ್ತು ಬದ್ಧ ಜಾಮೀನು ಮಂಜೂರಾಗಿರುವ ಬಗ್ಗೆ ಖರ್ಗೆ ಪ್ರತಿಕ್ರಿಯೆ ನೀಡಿದರು.