ಬೆಂಗಳೂರು : ಶಿವಮೊಗ್ಗ ಲಯನ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸುವ ಮೂಲಕ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತನ್ನ ಎರಡನೇ ಗೆಲುವು ಸಾಧಿಸಿತು. ಈ ಮೂಲಕ ಶಿವಮೊಗ್ಗ ಲಯನ್ಸ್ ತಂಡದ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಮೈಸೂರು ಪರ ಕರುಣ್ ನಾಯರ್ (60), ಸಿ.ಎ.ಕಾರ್ತಿಕ್ (46 ರನ್ 2/28 ವಿಕೆಟ್) ಹಾಗೂ ಎಂ.ವೆಂಕಟೇಶ್ (18ಕ್ಕೆ 3) ಗೆಲುವಿನ ರೂವಾರಿಗಳೆನಿಸಿದರು.
ಟಾಸ್ ಗೆದ್ದ ಶಿವಮೊಗ್ಗ ಲಯನ್ಸ್ ಮೊದಲು ಮೈಸೂರು ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭದಲ್ಲೇ ಆರ್.ಸಮರ್ಥ್ ವಿಕೆಟ್ ಕಳೆದುಕೊಂಡರೂ ಸಹ ಸಿ.ಎ.ಕಾರ್ತಿಕ್ ಮತ್ತು ನಾಯಕ ಕರುಣ್ ನಾಯರ್ ಕೇವಲ 48 ಎಸೆತಗಳಲ್ಲಿ 90 ರನ್‌ಗಳ ಜೊತೆಯಾಟವಾಡುವ ಮೂಲಕ ಮೈಸೂರು ವಾರಿಯರ್ಸ್ ಮೇಲುಗೈ ಸಾಧಿಸಿತು. ಸಿ.ಎ.ಕಾರ್ತಿಕ್ 29 ಎಸೆತಗಳಲ್ಲಿ 46 ರನ್ ಗಳಿಸಿದ್ದಾಗ ಶಿವಮೊಗ್ಗ ಲಯನ್ಸ್ ಎಡಗೈ ಸ್ಪಿನ್ನರ್ ಪ್ರಣವ್ ಭಾಟಿಯಾಗೆ ವಿಕೆಟ್ ಒಪ್ಪಿಸಿದರು. ಅದ್ಭುತ ಫಾರ್ಮ್ ಮುಂದುವರೆಸಿದ ಕರುಣ್ ನಾಯರ್ 27 ಎಸೆತಗಳಲ್ಲಿ ಸೊಗಸಾದ ಅರ್ಧಶತಕ ದಾಖಲಿಸಿ ಮಿಂಚಿದರು.
ನಂತರದ ಓವರ್‌ಗಳಲ್ಲಿ ರಾಹುಲ್ ರಾವತ್ (10), ಕರುಣ್ ನಾಯರ್ (60) ಮತ್ತು ಶಿವಕುಮಾರ್ ರಕ್ಷಿತ್ (6) ವಿಕೆಟ್ ಪಡೆಯುವ ಮೂಲಕ ಶಿವಮೊಗ್ಗ ಬೌಲರ್‌ಗಳು ತಿರುಗೇಟು ಕೊಟ್ಟರು. ಕೆಳ ಕ್ರಮಾಂಕದಲ್ಲಿ ಮನೋಜ್ ಭಾಂಡಗೆ 12 ಎಸೆತಗಳಲ್ಲಿ 29 ರನ್ ಗಳಿಸುವ ಮೂಲಕ ಉಪಯುಕ್ತ ಕೊಡುಗೆ ನೀಡಿದರು. ಅಂತಿಮವಾಗಿ, ಮೈಸೂರು ವಾರಿಯರ್ಸ್ 9 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿತು. ಶಿವಮೊಗ್ಗ ಪರ ವಿ.ಕೌಶಿಕ್ (2/34) ಮತ್ತು ಕ್ರಾಂತಿಕುಮಾರ್ (2/35) ತಲಾ ಎರಡು ವಿಕೆಟ್ ಪಡೆದರು.
ಬೃಹತ್ ಮೊತ್ತ ಬೆನ್ನತ್ತಿದ ಶಿವಮೊಗ್ಗದ ಪರ ಆರಂಭಿಕ ನಿಹಾಲ್ ಉಳ್ಳಾಲ್ ಮೊದಲ ಓವರ್‌ನಲ್ಲಿ ಔಟಾದರು. ನಂತರ ಬಂದ ರೋಹಿತ್ ಕುಮಾರ್ ಯಾವುದೇ ಪರಿಣಾಮ ಬೀರದೆ ವಿಕೆಟ್ ಒಪ್ಪಿಸಿದರು. ಆದರೆ ಆರಂಭಿಕ ರೋಹನ್ ಕದಂ (31) ಮತ್ತು ರೋಹನ್ ನವೀನ್ (28) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ಪರಿಣಾಮವಾಗಿ 6 ಓವರ್‌ಗಳ ಅಂತ್ಯಕ್ಕೆ ಶಿವಮೊಗ್ಗ ಲಯನ್ಸ್ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿತು.