ಬೆಂಗಳೂರು: ಶಿವಮೊಗ್ಗ ಲಯನ್ಸ್ ತಂಡವನ್ನು ಅನಾಯಾಸವಾಗಿ ಸೋಲಿಸಿದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ತಾಹಾ (69) ಮತ್ತು ಕೆ.ಎಲ್.ಶ್ರೀಜಿತ್ (61*) ಜೊತೆಯಾಟದ ಬಲದಿಂದ ಶಿವಮೊಗ್ಗವನ್ನು ಆರು ಓವರ್‌ಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳಿಂದ ಮಣಿಸಿತು.
ಟಾಸ್ ಸೋತು ಶಿವಮೊಗ್ಗ ಲಯನ್ಸ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆರಂಭಿಕರನ್ನು ಪವರ್ ಪ್ಲೇನಲ್ಲಿ ಹುಬ್ಬಳ್ಳಿ ಬೌಲರ್‌ಗಳು ನಿಯಂತ್ರಿಸಿದರು. 7ನೇ ಓವರ್ ಎಸೆದ ಮಿತ್ರಕಾಂತ್ ಯಾದವ್ ಅವರು ನಿಹಾಲ್ ಉಳ್ಳಾಲ್ (7) ವಿಕೆಟ್ ಪಡೆದು ಹುಬ್ಬಳ್ಳಿಗೆ ಯಶಸ್ಸು ತಂದುಕೊಟ್ಟರು. ನಂತರ ಬಂದ ವಿನಯ್ ಸಾಗರ್ ಜೊತೆಗೂಡಿದ ರೋಹನ್ ಕದಂ ಅರ್ಧಶತಕ (54) ಗಳಿಸಿ ಔಟಾದರು.
ಮುಂದೆ, ವಿನಯ್ ಸಾಗರ್ (7) ರನೌಟಿಗೆ ಬಲಿಯಾದರೆ, ಅಭಿನವ್ ಮನೋಹರ್ (2) ಹೆಚ್ಚು ಕಾಲ ಕ್ರೀಸ್ನಲ್ಲಿ ನೆಲೆಗೊಳ್ಳಲಿಲ್ಲ. 12.4 ಓವರ್‌ಗಳಲ್ಲಿ ಶಿವಮೊಗ್ಗ 4 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತ್ತು. ಈ ಹಂತದಲ್ಲಿ ಕ್ರೀಸಿಗೆ ಬಂದ ಎಚ್.ಎಸ್.ಶರತ್ (18) ಮತ್ತು ಶ್ರೇಯಸ್ ಗೋಪಾಲ್ (16) ದೊಡ್ಡ ಮೊತ್ತ ಕಲೆಹಾಕಲು ವಿಫಲವಾದರು. ಶಿವರಾಜ್ (6) ಔಟಾದ ನಂತರ ಪ್ರಣವ್ ಭಾಟಿಯಾ (17*) ಮತ್ತು ಕ್ರಾಂತಿ ಕುಮಾರ್ (9*) ಅಜೇಯರಾಗುಳಿದರು. ಇದರಿಂದ ಶಿವಮೊಗ್ಗ ಲಯನ್ಸ್ ನಿಗದಿತ ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು.