ಬೆಂಗಳೂರು: ಮಹಾರಾಜ ಕ್ರಿಕೆಟ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಶಿವಮೊಗ್ಗ ಲಯನ್ಸ್ ತಂಡ 9 ರನ್‌ಗಳ ರೋಚಕ ಜಯ ಸಾಧಿಸಿದ್ದು, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಭಿನವ್ ಮನೋಹರ್ ಹಾಗೂ ನಾಯಕ ಶ್ರೇಯಸ್ ಗೋಪಾಲ್ ಜೊತೆಯಾಟ, ಬೌಲಿಂಗ್‌ನಲ್ಲಿ ವಿ.ಕೌಶಿಕ್ ಹಾಗೂ ಹೆಚ್.ಎಸ್.ಶರತ್ ಕರಾರುವಾಕ್ ಪ್ರದರ್ಶನ ಶಿವಮೊಗ್ಗ ತಂಡದ ನೆರವಿಗೆ ಬಂತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಶಿವಮೊಗ್ಗ ಲಯನ್ಸ್ ಪರ ಆರಂಭಿಕರಾದ ರೋಹನ್ ಕದಂ ಹಾಗೂ ನಿಹಾಲ್ ಉಲ್ಲಾಳ್ 50 ರನ್‌ಗಳ ಜೊತೆಯಾಟ ನೀಡಿದರು. ಈ ಸಂದರ್ಭದಲ್ಲಿ ದಾಳಿಗಿಳಿದ ಮಂಗಳೂರು ತಂಡದ ವೇಗಿ ನವೀನ್ ಎಂ.ಜಿ ಇಬ್ಬರೂ ಆರಂಭಿಕರಿಗೆ ಪೆವಿಲಿಯನ್ ದಾರಿ ತೋರಿಸಿದರು. ಬಳಿಕ ಕ್ರೀಸಿಗೆ ಬಂದ ಅಭಿನವ್ ಮನೋಹರ್ (50) ಹಾಗೂ ನಾಯಕ ಶ್ರೇಯಸ್ ಗೋಪಾಲ್ (46) ಒಟ್ಟು 93 ರನ್‌ಗಳ ಉತ್ತಮ ಜೊತೆಯಾಟವಾಡಿದರು. ಈ ಹಂತದಲ್ಲಿ ಮತ್ತೊಮ್ಮೆ ದಾಳಿಗಿಳಿದ ನವೀನ್.ಎಂ.ಜಿ, ಶ್ರೇಯಸ್ ಹಾಗೂ ಅಭಿನವ್ ವಿಕೆಟ್ ಕಿತ್ತರು. ಅಂತಿಮವಾಗಿ ಶಿವಮೊಗ್ಗ ಲಯನ್ಸ್ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು 176 ರನ್ ಗಳಿಸಿತು. ಡ್ರ್ಯಾಗನ್ಸ್ ಪರ ನವೀನ್.ಎಂ.ಜಿ 19/4 ವಿಕೆಟ್ ಪಡೆದು ಮಿಂಚಿದರು.
177 ರನ್‌ಗಳ ಗುರಿ ಬೆನ್ನಟ್ಟಿದ ಮಂಗಳೂರು ಪರ ಆರಂಭಿಕನಾಗಿ ಕಣಕ್ಕಿಳಿದ ಇಂಪ್ಯಾಕ್ಟ್ ಆಟಗಾರ ರೋಹನ್ ಪಾಟೀಲ್ (23) ಹಾಗೂ ಬಿ.ಆರ್.ಶರತ್ (15) ಉತ್ತಮ ಸ್ಕೋರ್ ಮುನ್ಸೂಚನೆ ನೀಡಿದರು. ಆದರೆ ಶಿವಮೊಗ್ಗದ ನಿಶ್ಚಿತ್ ರಾವ್ ಮಂಗಳೂರಿನ ಇಬ್ಬರೂ ಆರಂಭಿಕರ ವಿಕೆಟ್ ಉರುಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಿಕಿನ್ ಜೋಸ್ ಹಾಗೂ ಅನೀಶ್ವರ್ ಗೌತಮ್ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಅಂತಿಮ 9 ಓವರ್‌ಗಳಲ್ಲಿ 100 ರನ್‌ಗಳ ಅಗತ್ಯವಿದ್ದಾಗ ಕೆ.ವಿ.ಸಿದ್ದಾರ್ಥ್ (46) ಹಾಗೂ ಅನಿರುದ್ ಜೋಶಿ (50) ರನ್ ಗಳಿಸುವ ಮೂಲಕ ಮಂಗಳೂರು ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಕೌಶಿಕ್ ಅವರ 19 ಓವರ್‌ನಲ್ಲಿ ರೋಹನ್ ಕದಂ ಅದ್ಭುತ ಕ್ಯಾಚಿಗೆ ಅನಿರುದ್ಧ್ ವಿಕೆಟ್ ಒಪ್ಪಿಸಿದರು. ಮಂಗಳೂರು ಗೆಲುವಿಗೆ ಅಂತಿಮ ಓವರ್‌ನಲ್ಲಿ 17 ರನ್‌ಗಳ ಅಗತ್ಯವಿತ್ತು. ಆದರೆ ಕೇವಲ 7 ರನ್ ಬಿಟ್ಟುಕೊಟ್ಟ ಶರತ್ ಶಿವಮೊಗ್ಗಕ್ಕೆ ಗೆಲುವು ದಕ್ಕಿಸಿಕೊಟ್ಟರು.
ನಿನ್ನೆ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗ ಮೈಸ್ಟಿಕ್ಸ್ ನಡುವೆ ನಡೆದ ಪಂದ್ಯದಲ್ಲಿ ಗುಲ್ಬರ್ಗ 6 ವಿಕೆಟ್ನ ಗೆಲುವು ದಾಖಲಿಸಿತ್ತು. ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ಮುಖಾಮುಖಿ ಆಗಿದ್ದು, ವಿಜೆಡಿ ನಿಯಮದಡಿ ಹುಬ್ಬಳ್ಳಿ ಗೆದ್ದಿತ್ತು. ಇಂದಿನ ನಾಲ್ಕನೇ ಪಂದ್ಯ ಗುಲ್ಬರ್ಗ ಮತ್ತು ಹುಬ್ಬಳ್ಳಿ ನಡುವೆ ನಡೆಯುತ್ತಿದ್ದು, ಟಾಸ್ ಸೋತು ಬ್ಯಾಟಿಂಗ್ಗಿಳಿದ ಗುಲ್ಬರ್ಗ 19.3 ಓವರ್ಗೆ 138ಕ್ಕೆ ಆಲ್ಔಟ್ ಆಗಿದೆ. ಹುಬ್ಬಳ್ಳಿ ಗೆಲುವಿಗೆ 139 ರನ್ ಬೇಕಿದೆ.
ಇದನ್ನೂ ಓದಿ:Rahul Dravid: ಏಷ್ಯಾಕಪ್ ವೇಳೆ ಕೆಲವು ಆಟಗಾರರು ಭಾರತ ತಂಡ ಸೇರುವ ಭರವಸೆ ಇದೆ- ರಾಹುಲ್ ದ್ರಾವಿಡ್