ಬೆಂಗಳೂರು: ಮಾಂಸ ತಿನ್ನೋದು ಬಿಡೋದು ಅವರವರ ಹ್ಯಾಬಿಟ್. ನಾನು ಮಾಂಸ ತಿನ್ನುತ್ತೇನೆ. ಅದು ನನ್ನ ಹ್ಯಾಬಿಟ್. ನೀವು ತಿನ್ನಲ್ವೇನಪ್ಪ, ಇಲ್ಲಿ ಎಷ್ಟು ಜನ ತಿನ್ನಲ್ಲ. ನಾನು ದೇವಸ್ಥಾನಗಳಿಗೆ ಹೋಗ್ತೇನೆ. ನಮ್ಮೂರ ದೇವಸ್ಥಾನದಲ್ಲಿ ನಾನು ಕುಣಿಯಲಿಲ್ವೇ?. ಅನೇಕ ಬಾರಿ ತಿರುಪತಿ, ಚಾಮುಂಡಿ, ನಂಜನಗೂಡಿಗೆ ಹೋಗಿದ್ದೇನೆ. ಎಷ್ಟೋ ದೇವರಿಗೆ ಮಾಂಸದ ಎಡೆ ಇಡ್ತಾರೆ. ನಾನು ಕೋಳಿ, ಕುರಿ, ಮೇಕೆ ಅಷ್ಟೇ ತಿನ್ನೋದು. ಅವರನ್ನ ನೀವು ಕೇಳ್ರೀ. ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ನಾನ್ಯಾಕೆ ಕೈಹಾಕಲಿ. ದೇವಸ್ಥಾನದಲ್ಲಿ ನಿವೇನು ತಿಂದ್ರಿ ಅಂತ ಕೇಳ್ತಾರೇನ್ರೀ?.. ನಾನು ಅವತ್ತು ತಿಂದೇ ಇಲ್ಲ. ವೀಣಾ ಅಚ್ಚಯ್ಯ ಕೇಳಿದ್ರು, ನಾನೇ ತಿನ್ನಲಿಲ್ಲ. ನಾನು ಮಾಂಸ ಹಾರಿ, ಅವರು ತಂದಿದ್ರೂ ಸಹ ನಾನು ತಿನ್ನಲಿಲ್ಲ. ಆರೋಪ ಬಂದಿದ್ದಕ್ಕೆ ನಾನು ಹೇಳ್ದೆ. ಅವರ ಬುಡಕ್ಕೆ ಕೈಹಾಕ್ತೇನೆ ಅನ್ನೋ ಭಯವಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ನಾನೊಬ್ಬ ಮಾಜಿ ಮುಖ್ಯಮಂತ್ರಿಯೂ ಆಗಿದ್ದು ಕಾನೂನು ಪಾಲನೆ ಮಾಡುವ ದೃಷ್ಟಿಯಿಂದ ಮಡಿಕೇರಿ ಚಲೋ ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಿದರು.ಸರ್ಕಾರಕ್ಕೆ ನನ್ನ ಮೇಲೆ ಭಯ ಬಂದಿದೆ. ಹಾಗಾಗಿ ಸಾವರ್ಕರ್ ವಿಚಾರವನ್ನೇ ಮುಂದಿಟ್ಟುಕೊಂಡಿದ್ದಾರೆ. ಸಾಕಷ್ಟು ಬಾರಿ ನಾನು ಕೊಡಗಿಗೆ ಹೋಗಿದ್ದೆ. ಆಗ ಯಾಕೆ ಪ್ರತಿಭಟನೆ ಮಾಡಿಸಲಿಲ್ಲ. ಈಗ ನನ್ನನ್ನು ಹತ್ತಿಕ್ಕಲು ನೋಡುತ್ತಿದ್ದಾರೆ. ಕೊಡಗಿಗೆ ಬರಲಿ ಅಂತ ಭೋಪಯ್ಯ ಸವಾಲು ಹಾಕಿದ್ದಾರೆ. ನಾವು ಸ್ವತಂತ್ರ ಭಾರತದಲ್ಲಿ ಇದ್ದೇವಿ ತಾನೇ?. ಹಿಂದೆ ರೆಡ್ಡಿ ಬ್ರದರ್ಸ್ ಸವಾಲು ಹಾಕಿದ್ರು. ಬಳ್ಳಾರಿ ಪಾದಯಾತ್ರೆ ಮಾಡಿದ್ವಿ. ಈಗ ಮಡಿಕೇರಿ ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದರು.
ಶೀಘ್ರವೇ ಮತ್ತೊಂದು ದಿನಾಂಕ ನಿಗದಿ: ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಅನಗತ್ಯವಾಗಿ ನನ್ನ ವಿರುದ್ಧ ಕಾರಣ ಇಲ್ಲದೆ ಪ್ರತಿಭಟನೆ ಮಾಡಿದ್ದಾರೆ. ಈಗ ನಿಷೇಧಾಜ್ಞೆ ಹೇರಿದ್ದಾರೆ. ನಾವು ನಿಷೇಧಾಜ್ಞೆ ಉಲ್ಲಂಘನೆ ಮಾಡಬಹುದಿತ್ತು. ಆದ್ರೆ ನಾನು ಮಾಜಿ ಸಿಎಂ ಇದ್ದೇನೆ. ಕಾನೂನು ಪಾಲನೆ ಮಾಡಲೇಬೇಕು. ಈಗ ಪಕ್ಷದ ನಾಯಕರ ಜೊತೆ ಮಾತನಾಡಿದ್ದೇನೆ. ಮಡಿಕೇರಿ ಚಲೋ ಕಾರ್ಯಕ್ರಮ ಮುಂದೂಡಿದ್ದೇವೆ. ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು.
ಭಜರಂಗದಳದವರ ಮೇಲೆ ಕ್ರಮ ಇಲ್ಲ:ಸಿಎಂ ಹೋದಾಗ ಅಲ್ಲಿನ ಶಾಸಕರ ಕಳಪೆ ಕೆಲಸ ಗೊತ್ತಾಗುತ್ತೆ ಅಂತ ಅವೈಡ್ ಮಾಡಿದ್ದಾರೆ. ಅಲ್ಲಿ ಒಬ್ಬರು ಕೋಳಿಮೊಟ್ಟೆ ಎಸೆದ್ರು. ಅಲ್ಲಿಯೂ ಪೊಲೀಸರು ಸುಮ್ಮನೆ ನಿಂತಿದ್ರು. ಭಜರಂಗದಳದವರ ಮೇಲೆ ಕ್ರಮ ಜರುಗಿಸಲಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ರು. ವೆಂಟೆಂಡ್ ಡ್ಯಾಂನಿಂದ ತೊಂದರೆಯಾಗಿದೆ ಅಂತ ಜನ ಹೇಳ್ತಿದ್ರು. 2018-19ರಲ್ಲೂ ಮಳೆಯಿಂದ ಹಾನಿಯಾಗಿದೆ. ಇಷ್ಟೆಲ್ಲಾ ಆದ್ರೂ ಸರ್ಕಾರ ಮನೆಗಳನ್ನ ಕೊಟ್ಟಿಲ್ಲ. ನಾವು 750 ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆವು. ಅವನ್ನು ಬಿಟ್ಟರೆ ಒಂದೇ ಒಂದು ಮನೆ ನಿರ್ಮಿಸಿಲ್ಲ. ಕೆಲವರಿಗೆ 10 ಸಾವಿರ ಚೆಕ್ ಕೊಟ್ಟಿದ್ದಾರೆ. ಆ ಚೆಕ್ ಹಣ ಇನ್ನೂ ಅವರಿಗೆ ತಲುಪಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.