ಕರ್ನಾಟಕ

karnataka

ETV Bharat / state

ಪ್ರಾರ್ಥನಾ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ; ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೆಎಸ್‌ಪಿಸಿಬಿಗೆ ಹೈಕೋರ್ಟ್ ತಾಕೀತು

ಪ್ರಾರ್ಥನಾ ಸ್ಥಳಗಳಲ್ಲಿ ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯ ಉಂಟಾಗದಂತೆ ಕಾನೂನು ರೀತಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಮುಂದಿನ ಎರಡು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಕೆಎಸ್ಪಿಸಿಬಿ ಅಧ್ಯಕ್ಷರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

Loudspeaker use in places of worship; The High Court has asked KSPCB to take strict action
ಸಂಗ್ರಹ ಚಿತ್ರ

By

Published : Dec 23, 2020, 12:27 AM IST

ಬೆಂಗಳೂರು :ಪ್ರಾರ್ಥನಾ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವಾಗ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಉಲ್ಲಂಘನೆ ಕಂಡುಬಂದರೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿರುವ ಹೈಕೋರ್ಟ್, ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೆ ನಿರ್ದೇಶಿಸಿದೆ.

ಬೆಂಗಳೂರಿನ ಗೋವಿಂದರಾಜ ನಗರದ ಅಯೇಷಾ ಮಸೀದಿಯಲ್ಲಿ ಮಿತಿಮೀರಿದ ಧ್ವನಿವರ್ಧಕ ಬಳಸುತ್ತಿರುವುದನ್ನು ಪ್ರಶ್ನಿಸಿ ವಕೀಲೆ ಸುಮಂಗಲ ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಿಜಯ್ ಕುಮಾರ್ ಗೋಗಿ, ಪ್ರಾರ್ಥನಾ ಸ್ಥಳಗಳಲ್ಲಿ ಮಿತಿಮೀರಿದ ಧ್ವನಿವರ್ಧಕಗಳ ಬಳಕೆ ತಡೆಯಲು ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಸಿದ್ದಪಡಿಸಿದ್ದ ಪ್ರಮಾಣಪತ್ರವನ್ನು ಮಂಡಳಿ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.

ಪ್ರಮಾಣಪತ್ರ ಪರಿಶೀಲಿಸಿದ ಪೀಠ, ಮಂಡಳಿ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳು ಸಮಾಧಾನಕರವಾಗಿಲ್ಲ. ಆದ್ದರಿಂದ ಪ್ರಾರ್ಥನಾ ಸ್ಥಳಗಳಲ್ಲಿ ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯ ಉಂಟಾಗದಂತೆ ಕಾನೂನು ರೀತಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಮುಂದಿನ ಎರಡು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಕೆಎಸ್‌ಪಿಸಿಬಿ ಅಧ್ಯಕ್ಷರಿಗೆ ನಿರ್ದೇಶಿಸಿತು.

ಇದನ್ನೂ ಓದಿ : ಧ್ವನಿ ವರ್ಧಕದ ಮೂಲಕ ಮಕ್ಕಳಿಗೆ ಆನ್​ಲೈನ್​​ ಪಾಠ: ಈ ಶಿಕ್ಷಕನಿಂದ ವಿನೂತನ ಪ್ರಯತ್ನ

ಇದೇ ವೇಳೆ ಅರ್ಜಿಯಲ್ಲಿ ಆರೋಪಿಸಿರುವ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ನಿಲ್ಲಿಸಲಾಗಿದೆಯೇ ಎಂದು ಪೀಠ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಸರ್ಕಾರಿ ವಕೀಲರು ಉತ್ತರಿಸಿ, ಧ್ವನಿವರ್ಧಕ ಬಳಸುವುದನ್ನು ನಿಲ್ಲಿಸಲಾಗಿದೆ ಎಂದು ಮಸೀದಿಯ ಆಡಳಿತ ಮಂಡಳಿ ಡಿಸೆಂಬರ್ 9ರಂದು ಬರೆದಿರುವ ಪತ್ರವನ್ನು ಪೀಠಕ್ಕೆ ಸಲ್ಲಿಸಿದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರ ವಕೀಲೆ, ಧ್ವನಿವರ್ಧಕ ಬಳಸಲಾಗುತ್ತಿದೆ. ಆದರೆ, ಧ್ವನಿ ಕಡಿಮೆಗೊಳಿಸಲಾಗಿದೆ ಎಂದರು. ಹೇಳಿಕೆಗಳನ್ನು ದಾಖಲಿಸಿಕೊಂಡ ಪೀಠ, ಆಗಿಂದಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ವಿಜಯನಗರ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್​ಗೆ ನಿರ್ದೇಶಿಸಿ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿತು.

ABOUT THE AUTHOR

...view details