ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವ ಗಂಭೀರ ಆರೋಪದಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ 13 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಸಂಬಂಧಿಕರ ನಿವಾಸಗಳು ಸೇರಿದಂತೆ ಒಟ್ಟು 68 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚರ, ಸ್ಥಿರಾಸ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತರ ವಿರುದ್ಧ ಪ್ರತ್ಯೇಕವಾಗಿ 13 ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
1) ಚನ್ನಕೇಶವ ಎಚ್.ಡಿ.- ಕಾರ್ಯಪಾಲಕ ಅಭಿಯಂತರ, ಕೆಪಿಟಿಸಿಎಲ್, ಬೆಂಗಳೂರು:ಚನ್ನಕೇಶವ ಅವರಿಗೆ ಸಂಬಂಧಿಸಿದ ಮನೆ ಹಾಗೂ ಇತರೆ ಏಳು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. 11,46 ಕೋಟಿ ರೂ ಮೌಲ್ಯದ ನಿವೇಶನ, ಮನೆ, ಜಮೀನಿಗೆ ಸೇರಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 1.44 ಕೋಟಿ ಮೌಲ್ಯದ 3 ಕೆ.ಜಿ. ಚಿನ್ನ, 28 ಕೆ.ಜಿ. ಬೆಳ್ಳಿ, 25 ಲಕ್ಷದ ವಜ್ರ, 5 ಲಕ್ಷದ ಸೇಲ್ ಡೀಡ್ ಸೇರಿದಂತೆ 15,53 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಳ್ಳಲಾಗಿದೆ.
2) ಎಚ್.ಎಸ್.ಕೃಷ್ಣಮೂರ್ತಿ- ಮುಖ್ಯ ಕಾರ್ಯನಿರ್ವಾಹಕ (ಭದ್ರತೆ) ಕೆಎಂಎಫ್, ಕಣಮಿಣಿಕೆ, ರಾಮನಗರ ಜಿಲ್ಲೆ:ಕೃಷ್ಣಮೂರ್ತಿ ಅವರಿಗೆ ಸಂಬಂಧಿಸಿದಐದು ಕಡೆಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ನಿವೇಶನ, ಮನೆ ಹಾಗೂ ಜಮೀನು ದಾಖಲಾತಿ ಸೇರಿದಂತೆ 49.87 ಲಕ್ಷ ಮೌಲ್ಯದ ಸ್ಥಿರಾಸ್ತಿ ಮತ್ತು 4 ಕೋಟಿ ರೂ.ಮೌಲ್ಯದ ಚಿನ್ನ-ಬೆಳ್ಳಿ ಹಾಗು ನಗದು ಜಪ್ತಿ ಮಾಡಿದ್ದಾರೆ.
3) ಟಿ.ಎನ್.ಸುಧಾಕರ್ ರೆಡ್ಡಿ- ಉಪಪ್ರಧಾನ ವ್ಯವಸ್ಥಾಪಕ, ಬೆಸ್ಕಾಂ, ಬೆಂಗಳೂರು:ಸುಧಾಕರ್ ಅವರಿಗೆ ಸಂಬಂಧಿಸಿದ ಮನೆ ಸೇರಿ ಐದು ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, 5.42 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಒಟ್ಟು 5.73 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿದೆ.
4) ಬಸವರಾಜ್- ನಿವೃತ್ತ ಕಿರಿಯ ಅಭಿಯಂತರ, ಹೆಸ್ಕಾಂ, ಹುಬ್ಬಳ್ಳಿ ನಗರ:ಬಸವರಾಜ್ ಅವರಿಗೆ ಸಂಬಂಧಿಸಿದ ಪ್ರತ್ಯೇಕ ಮೂರು ಕಡೆಗಳಲ್ಲಿ ದಾಳಿ ನಡೆಸಿ 2.31 ಕೋಟಿ ಮೌಲ್ಯದ ಸ್ಥಿರಾಸ್ತಿ, 80 ಲಕ್ಷ ನಗದು, 24,84 ಲಕ್ಷದ ವಾಹನಗಳು, 18.33 ಲಕ್ಷದ 331 ಗ್ರಾಂ ಚಿನ್ನ, 18 ಲಕ್ಷದ 26 ಕೆ.ಜಿ.ಬೆಳ್ಳಿ, ಬ್ಯಾಂಕ್ ಖಾತೆಯಲ್ಲಿ 23 ಲಕ್ಷ ಹಣ, 10 ಲಕ್ಷದ ಮೌಲ್ಯದ ಗೃಹೋಪಯೋಗಿ ವಸ್ತು ಸೇರಿದಂತೆ ಒಟ್ಟು 4 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ.
5) ಮಹದೇವಸ್ವಾಮಿ ಎಂ.ಎಸ್.- ಉಪನ್ಯಾಸಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡು, ಮೈಸೂರು:ಮಹದೇವಸ್ವಾಮಿ ಅವರಿಗೆ ಸಂಬಂಧಿಸಿದ 12 ಕಡೆಗಳಲ್ಲಿ ದಾಳಿ ಮಾಡಿ 6 ಕೋಟಿ ಮೌಲ್ಯದ ನಿವೇಶನ, ಮನೆ ಹಾಗೂ ಜಮೀನಿಗೆ ಸಂಬಂಧಿಸಿದ ಕಾಗದ ಪತ್ರಗಳು ಪತ್ತೆಯಾಗಿವೆ. 2.33 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 8.41 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿವೆ.
6) ತಿಮ್ಮರಾಜಪ್ಪ- ಕಾರ್ಯಪಾಲಕ ಅಭಿಯಂತರ, ಕೆಆರ್ ಐಡಿಎಲ್, ವಿಜಯಪುರ :ಮೂಲತಃ ಕೆಜಿಎಫ್ ನಿವಾಸಿಯಾಗಿರುವ ತಿಮ್ಮರಾಜಪ್ಪ ಪ್ರಸ್ತುತ ಕೆಆರ್‌ಐಡಿಎಲ್‌ನಲ್ಲಿ ಕಾರ್ಯಪಾಲಕ ಅಭಿಯಂತರರು. ಇವರಿಗೆ ಸಂಬಂಧಿಸಿದ ಸುಮಾರು 9 ಕಡೆಗಳಲ್ಲಿ ದಾಳಿ ನಡೆಸಿದ್ದು, ಸುಮಾರು 8 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ 1 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 9 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಆದಾಯಕ್ಕೂ ಮೀರಿ ಆಸ್ತಿ ಸಂಬಂಧ ಕೋಲಾರದ ಲೋಕಾಯುಕ್ತ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.