ಬೆಂಗಳೂರು ಸೇರಿ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ, ಆದಾಯ ಮೀರಿ ಆಸ್ತಿಗಳಿಕೆ ಆರೋಪಗಳಡಿ ದಾಳಿ ನಡೆಸಲಾಗಿದೆ.
ಇನ್ನು ಅಕ್ರಮ ಆಸ್ತಿಗಳಿಕೆ ಆರೋಪದಡಿ ಕೆ.ಆರ್.ಪುರ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಹಶೀಲ್ದಾರ್ ಅಜೀತ್ ರಾಜ್ ರೈ ಎಂಬುವವರ ವಿರುದ್ಧ ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿ ಬಂದಿದ್ದು, ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ಏಕಾಏಕಿ ಅವರ ಮನೆ, ಕಚೇರಿ ಮೇಲೆ ಲೋಕಾಯುಕ್ತ ನಗರ ವಿಭಾಗದ ಎಸ್ಪಿ ಅಶೋಕ್ ನೇತೃತ್ವದ ತಂಡ ದಾಳಿ ನಡೆಸಿದೆ. ಸಹಕಾರನಗರ, ರಾಮಮೂರ್ತಿನಗರದಲ್ಲಿರುವ ನಿವಾಸಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ರಾಜ್ಯಾದ್ಯಂತ ಲೋಕಾಯುಕ್ತ ದಾಳಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಅಜಿತ್, ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್ ನಿಂದ ತಡೆಯಾಜ್ಞೆ ತರಲು ನೆರವು ನೀಡಿದ್ದರು ಎಂಬ ಆರೋಪದಡಿ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಕೆಲ ದಿನಗಳ ಹಿಂದೆ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದ್ದರಿಂದ ಮತ್ತೆ ಕೆ.ಆರ್. ಪುರ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ಕಳೆದ ಒಂದು ವಾರದ ಹಿಂದಷ್ಟೇ ಸ್ಥಳ ತೋರಿಸದೇ ಅಜಿತ್ ರೈ ಅವರನ್ನ ವರ್ಗಾವಣೆ ಮಾಡಲಾಗಿತ್ತು ಎಂಬ ವಿಚಾರ ಗೊತ್ತಾಗಿದೆ. ದಾಳಿ ವೇಳೆ ಸಹಕಾರನಗರದ ಅಜಿತ್ ರೈ ಮನೆಯಲ್ಲಿ ವಿದೇಶಿ ಲಿಕ್ಕರ್ ಬಾಟಲ್ ಕಂಡುಬಂದಿವೆ.
ಇದಷ್ಟೇ ಅಲ್ಲದೇ ನಗರದ ವಿವಿಧ 10 ಕಡೆ ಲೋಕಾಯುಕ್ತ ದಾಳಿ ನಡೆದಿದ್ದು, 20 ಅಧಿಕಾರಿಗಳ ತಂಡ ಬೆಂಗಳೂರು, ಬಾಗಲಕೋಟೆ, ಬೀಳಗಿ ಸೇರಿ ರಾಜ್ಯದ ವಿವಿಧ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ.
ದಾಳಿ ವೇಳೆ, ಕೆಲವು ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಮಹತ್ವದ ದಾಖಲಾತಿಗಳನ್ನ ವಶಕ್ಕೆ ಪಡೆದುಕೊಂಡು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲೋಕಾಯುಕ್ತ ಅಧಿಕಾರಿಗಳ ಮೂಲಗಳಿಂದ ತಿಳಿದು ಬಂದಿದೆ.
ಕಲಬುರಗಿಯಲ್ಲೂ ದಾಳಿ:ಕಲಬುರಗಿಯ ಖಣದಾಳ ಗ್ರಾಮದ ಬಳಿ ಇರುವ ರಾಯಚೂರು ಜಿಲ್ಲೆ ಸಿಂಧನೂರು ತಾಲಾಕಿನ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳ ಅವರ ಫಾರ್ಮ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಸಿಂಧನೂರಿನಲ್ಲಿರುವ ಕಚೇರಿ, ಬಾಡಿಗೆ ಮನೆ, ಫಾರ್ಮ್ ಹೌಸ್ಗಳ ಮೇಲೆ ದಾಳಿ ನಡೆಸಲಾಗಿದ್ದು ಶೋಧಕಾರ್ಯ ನಡೆಸುತ್ತಿದ್ದಾರೆ. ಎಸ್ಪಿ ಎ.ಆರ್. ಕರ್ನೂಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ನಕ್ಷತ್ರ ಆಮೆ ಪತ್ತೆ:ಬಾಗಲಕೋಟೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆಗಿರುವ ಚೇತನಾ ಪಾಟೀಲ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಎರಡು ನಕ್ಷತ್ರ ಆಮೆಗಳು ಪತ್ತೆಯಾಗಿವೆ. ದಾಖಲೆ ಪರಿಶೀಲನೆ ವೇಳೆ ಆಮೆ ಪತ್ತೆಯಾಗಿವೆ. ಹಲವು ದಿನಗಳಿಂದ ಮನೆಯಲ್ಲಿ ಆಮೆ ಸಾಕಿದ್ದರು ಎನ್ನಲಾಗಿದೆ. ಅರಣ್ಯ ಕಾಯ್ದೆ ಅಡಿ ಪ್ರಾಣಿಗಳನ್ನು ಸಾಕಲು ನಿಷೇಧವಿದ್ದರೂ ಸರ್ಕಾರಿ ಅಧಿಕಾರಿಯು ಕಾನೂನು ಉಲ್ಲಂಘನೆ ಮಾಡಿದ್ದಾರೆ.
ತುಮಕೂರು:ಇಲ್ಲಿನ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಜೆಡಿ ರವಿ ಎಂಬುವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಮನೆ ಹಾಗೂ ಫಾರಂ ಹೌಸ್ನಲ್ಲಿ ಪರಿಶೀಲನೆ ಕೈಗೊಂಡಿದ್ದಾರೆ. ಇನ್ನೊಂದೆಡೆ ತುಮಕೂರಿನ ಶಿರಾದ ಪಂಚಾಯತ್ರಾಜ್ ಇಲಾಖೆ ಎಇ ಪುಟ್ಟರಾಜು ಮನೆ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ತುಮಕೂರು ನಗರದ ಅಶೋಕ ನಗರದಲ್ಲಿರುವ ಮನೆ ಹಾಗೂ ಯಲ್ಲಾಪುರದಲ್ಲಿನ ಕಾಂಪ್ಲೆಕ್ಸ್ನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಕೊಡಗು:ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಧಿಕಾರಿ ಬಶೀರ್ ಮನೆ ಜೊತೆಗೆ ಆತನ ಸಹೋದರನ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಅಧಿಕಾರಿ ಮನೆಯಲ್ಲಿ ನಗದು, ಮಹತ್ವದ ದಾಖಲಾತಿಗಳು ಪತ್ತೆಯಾಗಿವೆ.
ಇದನ್ನೂ ಓದಿ:NIA RAID: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ.. ದಕ್ಷಿಣಕನ್ನಡ, ಕೊಡಗು ಜಿಲ್ಲೆಗಳಲ್ಲಿ ಎನ್ಐಎ ದಾಳಿ