ಕರ್ನಾಟಕ

karnataka

ETV Bharat / state

ಒಬಿಸಿ ಮೀಸಲಾತಿಯೊಂದಿಗೆ ಸ್ಥಳೀಯ ಸಂಸ್ಥೆ ಚುನಾವಣೆ: ಸಿಎಂ ಬೊಮ್ಮಾಯಿ - ಒಬಿಸಿ ಮೀಸಲಾತಿ

ಈಗಾಗಲೇ ಹಿಂದುಳಿದ ವರ್ಗಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಡುವ ಕುರಿತು ಒಂದು ಆಯೋಗ ರಚಿಸಿದ್ದೇವೆ. ಒಬಿಸಿ ಮೀಸಲಾತಿ ಇರಿಸಿಕೊಂಡೇ ಸ್ಥಳೀಯ ಸಂಸ್ಥೆ ಚುನಾವಣೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : May 12, 2022, 1:06 PM IST

ಬೆಂಗಳೂರು: ಒಬಿಸಿ ಮೀಸಲಾತಿ ಇರಿಸಿಕೊಂಡು ಸ್ಥಳೀಯ ಸಂಸ್ಥೆ ಚುನಾವಣೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶ. ಈ ಬಗ್ಗೆ ಇರುವ ಕಾನೂನಾತ್ಮಕ ಅವಕಾಶಗಳ ಕುರಿತು ಸಚಿವ ಸಂಪುಟ ಸಭೆಗೂ ಮುನ್ನ ಸಂಬಂಧಪಟ್ಟವರ ಜೊತೆ ಸಭೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಸಭೆ ನಡೆಸುತ್ತಿದ್ದೇವೆ. ಕಾನೂನು ಸಚಿವರು, ಅಡ್ವೊಕೇಟ್ ಜನರಲ್ ಸೇರಿ ಸಂಬಂಧಪಟ್ಟ ಎಲ್ಲರ ಜೊತೆಗೂ ಒಂದು ಸಭೆಯನ್ನು ನಡೆಸಿ, ಸುಪ್ರೀಂಕೋರ್ಟ್​ನ ಎರಡು ತೀರ್ಪು ಕುರಿತು ಸಂಪೂರ್ಣ ವಿಶ್ಲೇಷಣೆ ಮಾಡುತ್ತೇವೆ. ಈಗಾಗಲೇ ಹಿಂದುಳಿದ ವರ್ಗಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಡುವ ಕುರಿತು ಒಂದು ಆಯೋಗ ರಚಿಸಿದ್ದೇವೆ. ಅದರ ಬಗ್ಗೆಯೂ ಕೂಡ ಚರ್ಚೆ ನಡೆಸುತ್ತೇವೆ. ಜೊತೆಗೆ ಪ್ರತಿಪಕ್ಷದ ನಾಯಕರು ಪತ್ರ ಬರೆದಿದ್ದಾರೆ. ಅದರ ಬಗ್ಗೆಯೂ ಸಮಾಲೋಚನೆ ಮಾಡಿ ಮುಂದೆ ಯಾವ ರೀತಿಯ ನಿಲುವು ತೆಗೆದುಕೊಳ್ಳಬೇಕು ಎಂದು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುತ್ತದೆ. ಸಾಧಕ-ಬಾಧಕಗಳ ಕುರಿತು ಮಾತುಕತೆ ನಡೆಸಲಾಗುತ್ತದೆ ಎಂದರು.


ಇದುವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಂವಿಧಾನದ ಪ್ರಕಾರವೇ ಒಬಿಸಿಗೆ ಮೀಸಲಾತಿ ಕೊಡುತ್ತಾ ಬರುತ್ತಿದ್ದೇವೆ. ಈಗಲೂ ಅದೇ ರೀತಿ ಚುನಾವಣೆ ನಡೆಸಬೇಕು ಎನ್ನುವುದು ಸರ್ಕಾರ ಮತ್ತು ಇತರೆ ರಾಜಕೀಯ ಪಕ್ಷಗಳ ಆಯ್ಕೆಯಾಗಿದೆ. ಹೀಗಾಗಿ, ಒಬಿಸಿ ಮೀಸಲಾತಿ ಇರಿಸಿಕೊಂಡೇ ಚುನಾವಣೆ ನಡೆಸಲು ಏನೆಲ್ಲಾ ಪ್ರಕ್ರಿಯೆಗಳು ಮಾಡಬೇಕು ಎನ್ನುವ ಕುರಿತು ಚಿಂತನೆ ನಡೆಸಲಿದ್ದೇವೆ. ಸುಪ್ರೀಂಕೋರ್ಟ್ ಆದೇಶ ಕುರಿತು ಮಧ್ಯಪ್ರದೇಶ ಸರ್ಕಾರ ಹಾಕಿರುವ ಪುನರ್ ಪರಿಶೀಲನಾ ಅರ್ಜಿ ಮಂಗಳವಾರ ವಿಚಾರಣೆಗೆ ಬರಲಿದೆ, ನಮ್ಮಲ್ಲೂ ಹಲವಾರು ವರದಿಗಳಿವೆ. ಹಾಗಾಗಿ, ಅವುಗಳೆಲ್ಲವನ್ನು ಗಮನಿಸಿ ಮೀಸಲಾತಿ ಕುರಿತು ಏನೆಲ್ಲಾ ಪ್ರಯತ್ನಿಸಬೇಕೋ ಆ ಎಲ್ಲವನ್ನು ಕಾನೂನಾತ್ಮಕವಾಗಿಯೇ ಪ್ರಯತ್ನ ಮಾಡಲಾಗುತ್ತದೆ.

ಸುಪ್ರೀಂಕೋರ್ಟ್ ಆದೇಶ ಬಹಳ ಸ್ಪಷ್ಟವಾಗಿದೆ. ರಾಜಕೀಯ ಮೀಸಲಾತಿ ವಿಚಾರದಲ್ಲಿ ಯಾವುದೇ ಅಂಕಿ ಅಂಶಗಳು ಬೇಡ, ಇದಕ್ಕಾಗಿಯೇ ಒಂದು ಪ್ರತ್ಯೇಕ ಸಮಿತಿ ರಚಿಸಿ, ಆಯೋಗ ರಚಿಸಿ ನಿಖರವಾದ ರಾಜಕೀಯ ಪ್ರಾತಿನಿಧ್ಯ ಯಾವ ಯಾವ ಸಮುದಾಯಕ್ಕೆ ಎಷ್ಟು ಸಿಕ್ಕಿದೆ ಎನ್ನುವ ಆಧಾರದ ಮೇಲೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ತೀರ್ಮಾನ ಮಾಡಬೇಕು ಮತ್ತು ಸುಪ್ರೀಂಕೋರ್ಟಿಗೆ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದೆ. ಹೀಗಾಗಿ, ನಾವು ಆಯೋಗ ರಚನೆ ಮಾಡಿದ್ದೇವೆ. ಆದರೆ ಒಬಿಸಿಗೆ ಮೀಸಲಾತಿ ಇರಿಸಿಕೊಂಡೇ ನಾವು ಚುನಾವಣೆ ಮಾಡಲಿದ್ದು, ಅದಕ್ಕೆ ಬೇಕಾದ ಕಾನೂನಾತ್ಮಕ ವಿಚಾರಗಳ ಕುರಿತು ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಸಿಎಂ ತಿಳಿಸಿದರು.

ಮತಾಂತರ ವಿಧೇಯಕ ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಆದರೆ ಪರಿಷತ್​ನಲ್ಲಿ ಇನ್ನೂ ಮಂಡನೆಯಾಗಿಲ್ಲ. ಅದಕ್ಕೂ ಮೊದಲೇ ಕಲಾಪ ಮುಂದೂಡಿಕೆಯಾಗಿದೆ. ಹಾಗಾಗಿ, ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿ ಮಾಡಲಿದ್ದೇವೆ, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಲಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ:ಸಿಎಂ ಭೇಟಿಯಾದ ಬಸವರಾಜ ಹೊರಟ್ಟಿ: ಪಕ್ಷ ಸೇರ್ಪಡೆ ದಿನಾಂಕ ನಿಗದಿ ಕುರಿತು ಸಮಾಲೋಚನೆ

ABOUT THE AUTHOR

...view details