ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರು ಹೊರವಲಯದ ಕೆಲವೆಡೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಬಲಿಯಾಗಿದೆ.
ಮೂರು ದಿನಗಳ ಕಾರ್ಯಾಚರಣೆ ಬಳಿಕ ಬುಧವಾರ ಬೊಮ್ಮನಹಳ್ಳಿ ಬಳಿಯ ಕುಡ್ಲುಗೇಟ್ ಬಳಿ ಚಿರತೆ ಸೆರೆ ಹಿಡಿಯಲಾಗಿತ್ತು. ಆದರೆ ಕಾರ್ಯಾಚರಣೆ ವೇಳೆ ಗುಂಡು ತಗುಲಿದ್ದ ಪರಿಣಾಮ ಅದು ಮೃತಪಟ್ಟಿದೆ. ಸೆರೆ ಹಿಡಿಯುವಾಗ ಚಿರತೆಯು ಅರಣ್ಯ ಇಲಾಖೆ ಸಿಬ್ಬಂದಿ, ಪಶು ವೈದ್ಯರು ಸೇರಿದಂತೆ ಮೂವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಅದು ದಾಳಿ ಮಾಡಿದ ವೇಳೆ ಸಿಬ್ಬಂದಿಯೊಬ್ಬರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರಿಂದ ಚಿರತೆಯ ಕತ್ತಿನ ಭಾಗಕ್ಕೆ ಗಾಯವಾಗಿತ್ತು. ಬಳಿಕ ರಕ್ಷಣೆ ಮಾಡಿ ಚಿರತೆ ಉಳಿಸಿಕೊಳ್ಳಲು ಯತ್ನಿಸಿದರೂ ಕೂಡ ಚಿಕಿತ್ಸೆ ಫಲಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.