ಬೆಂಗಳೂರು :ರಾಜ್ಯ ಸರ್ಕಾರದ ವಿರುದ್ಧ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ನಿಲ್ಲದ ಹಿನ್ನೆಲೆ ವಿಧಾನ ಪರಿಷತ್ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಬೆಳಗ್ಗೆ ಮೂರು ಸಾರಿ ಮುಂದೂಡಿಕೆಯಾಗಿದ್ದ ಪರಿಷತ್ ಕಲಾಪ ಮಧ್ಯಾಹ್ನದ ನಂತರ ಗದ್ದಲದ ಕಾರಣಕ್ಕಾಗಿ ಮತ್ತೊಮ್ಮೆ ಮುಂದೂಡಿಕೆಯಾಯಿತು. 15 ನಿಮಿಷಗಳ ವಿರಾಮದ ಬಳಿಕ ಸಮಾವೇಶಗೊಂಡ ಸದನದಲ್ಲಿ ಬಿಜೆಪಿ ತನ್ನ ಪಟ್ಟು ಸಡಿಲಿಸದೆ ನಿಳುವಳಿ ಸೂಚನೆ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡದಿದ್ದರೆ ಯಾವುದೇ ಚಟುವಟಿಕೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಒತ್ತಡ ಹೇರಿತು.
ಪ್ರಶ್ನೋತ್ತರ ಅವಧಿ ಹಾಗೂ ಶೂನ್ಯ ವೇಳೆಯನ್ನು ಮುಗಿಸಿ ನಿಲುವಳಿ ಸೂಚನೆ ಪ್ರಸ್ತಾವನೆಗೆ ಅವಕಾಶ ನೀಡುವುದಾಗಿ ಬೆಳಗ್ಗೆ ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ ಕೆ ಪ್ರಾಣೇಶ್ ರೂಲಿಂಗ್ ನೀಡಿದ್ದರು. ಅದನ್ನೇ ಎತ್ತಿ ಹಿಡಿಯುವಂತೆ ಕಾಂಗ್ರೆಸ್ ಸದಸ್ಯರು ಸಭಾಪತಿ ಬಸವರಾಜ್ ಹೊರಟ್ಟಿ ಅವರ ಮೇಲೆ ಒತ್ತಡ ಹೇರಿದರು.
ಬಿಜೆಪಿ ನಾಯಕರ ಮನವೊಲಿಸಿ ಪ್ರಶ್ನೋತ್ತರ ಅವಧಿ ನಡೆಸುವ ಪ್ರಯತ್ನವನ್ನು ಬಸವರಾಜ್ ಹೊರಟ್ಟಿ ನಿರಂತರವಾಗಿ ಮಾಡಿದರು. ಆದರೆ ಬಿಜೆಪಿ ಸದಸ್ಯರು ತಮ್ಮ ಪಟ್ಟು ಬಿಡಲಿಲ್ಲ. ಜೆಡಿಎಸ್ ಸದಸ್ಯರಾದ ಮರಿತಿಬ್ಬೇಗೌಡ ಹಾಗೂ ಬೋಜೇಗೌಡ ಅವರು ಸಹ ಮಾತನಾಡಿ, ಬಿಜೆಪಿ ನಾಯಕರು ಪ್ರತಿಭಟನೆ ಹಿಂಪಡೆದು ಪ್ರಶ್ನೋತ್ತರ ಅವಧಿ ನಡೆಸಲು ಅವಕಾಶ ಮಾಡಿಕೊಡಬೇಕು. ಅತ್ಯಂತ ಮಹತ್ವದ ವಿಚಾರಗಳ ಮೇಲೆ ಚರ್ಚೆ ನಡೆಯಬೇಕಿರುವುದರಿಂದ ಕಲಾಪ ಮುಂದುವರಿಸಲು ಅವಕಾಶ ಮಾಡಿಕೊಡಬೇಕು. ಸದನದ ಬಾವಿಗಿಳಿದಿರುವ ಬಿಜೆಪಿ ಸದಸ್ಯರು ಮರಳಿ ತಮ್ಮ ಸ್ಥಾನಕ್ಕೆ ಆಗಮಿಸಿ ಸದನವನ್ನು ಒಂದು ಸಹಜ ಸ್ಥಿತಿಗೆ ತರಲು ಸಹಕರಿಸಬೇಕು ಎಂದು ಮನವಿ ಮಾಡಿದರು.