ಕರ್ನಾಟಕ

karnataka

By ETV Bharat Karnataka Team

Published : Nov 10, 2023, 7:20 AM IST

ETV Bharat / state

ಶಾಲಾ ಕಾಲೇಜು, ಗ್ರಾಮಗಳಿಗೆ ಕಾನೂನು ಅರಿವು ಕಾರ್ಯಕ್ರಮ ವಿಸ್ತರಣೆ: ಹೈಕೋರ್ಟ್ ಸಿಜೆ ವರಾಳೆ

Legal Services Day: ಹೈಕೋರ್ಟ್​ನಲ್ಲಿ ಕಾನೂನು ಸೇವಾ ದಿನ ಆಚರಣೆ. ಗ್ರಾಮೀಣ ಭಾಗಗಳಿಗೂ ಕಾನೂನು ಸೇವೆ ಲಭ್ಯವಾಗುವಂತೆ ಕಾನೂನು ಪರಿಹಾರ ಕೇಂದ್ರ ಪ್ರಾರಂಭಿಸುವುದಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವರಾಳೆ ತಿಳಿಸಿದರು.

Etv Bharat
Etv Bharat

ಬೆಂಗಳೂರು:ಸಮಾಜದ ಎಲ್ಲ ನಾಗರಿಕರಿಗೂ ತಮಗಿರುವ ಕಾನೂನು ಹಕ್ಕುಗಳು ಹಾಗೂ ಜವಾಬ್ದಾರಿಗಳನ್ನು ತಿಳಿಸಲು ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೂ ಕಾನೂನು ಅರಿವು ಕಾರ್ಯಕ್ರಮ ವಿಸ್ತರಿಸುವ ಉದ್ದೇಶವಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹೇಳಿದ್ದಾರೆ. ರಾಜ್ಯ ಹೈಕೋರ್ಟ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ಬೆಂಗಳೂರು ವಕೀಲರ ಸಂಘದ ಸಹಭಾಗಿತ್ವದಲ್ಲಿ ನಗರದ ಹೈಕೊರ್ಟ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಸೇವಾ ದಿನ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗಗಳಿಗೂ ಕಾನೂನು ಸೇವೆಗಳು ಲಭ್ಯವಾಗುವಂತೆ ಮಾಡುವ ಸಲುವಾಗಿ ಸಂಚಾರಿ ಕಾನೂನು ಪರಿಹಾರ ಕ್ರೇಂದ್ರಗಳನ್ನು ಪ್ರಾರಂಭಿಸಿ ಈ ಭಾಗದ ಜನತೆಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರಸ್ತುತ ನ್ಯಾಯಾಲಯಗಳ ಮೇಲೆ ಇರುವ ಒತ್ತಡ ಕಡಿಮೆ ಮಾಡುವುದಕ್ಕಾಗಿ ಪರ್ಯಾಯ ಮಾರ್ಗಗಳಾದ ಮಧ್ಯಸ್ಥಿಕೆ ಕೇಂದ್ರಗಳಿಗೆ ಒತ್ತು ನೀಡಲಾಗುವುದು. ನಾಗರಿಕ ಸಮಾಜ ಮತ್ತು ಎನ್‌ಜಿಒಗಳ ಸಹಯೋಗದಲ್ಲಿ ಸುಸ್ಥಿರ ಕಾನೂನು ಅರಿವು ಕಾರ್ಯಕ್ರಮಗಳಿಂದ ಸಾರ್ವಜನಿಕರಿಗೆ ಉಚಿತ ಕಾನೂನು ಲಭ್ಯವಾಗುವುದನ್ನು ತಿಳಿಸಲಾಗುವುದು. ಆ ಮೂಲಕ ಕಾನೂನು ಎನ್ನುವುದು ಒಂದು ಸವಲತ್ತು ಅಲ್ಲ. ಬದಲಿಗೆ ಅದೊಂದು ಎಲ್ಲರ ಹಕ್ಕು ಎಂಬುದು ತಿಳಯುವಂತೆ ಮಾಡಲಾಗುವುದು ಎಂದರು.

ಕಾನೂನು ಕಾಲೇಜುಗಳು ಮತ್ತು ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ಸುಧಾರಣೆ ತರುವ ಸಲುವಾಗಿ ಪ್ರಾಯೋಗಿಕ ಕಾನೂನು ಕೌಶಲ್ಯ ಹೆಚ್ಚಳ ಮಾಡುವುದು ಮತ್ತು ನೈತಿಕ ಮೌಲ್ಯಗಳ ಒಳಗೊಳ್ಳುವಂತೆ ಪಠ್ಯಕ್ರಮ ಜಾರಿ ಮಾಡಲಾಗುವುದು. ನ್ಯಾಯದಾನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸುವುದು ಮತ್ತು ಮತ್ತಷ್ಟು ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕಾಗಿ ತಂತ್ರಜ್ಞಾನದ ನೆರವು ಪಡೆದುಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ವಿವರಿಸಿದರು.

ಪ್ರಸ್ತುತ ರಾಜ್ಯದಲ್ಲಿ 1,144 ಕಾನೂನು ಸೇವಾ ಪರಿಹಾರ ಕೇಂದ್ರಗಳಿದ್ದು, 2,782 ವಕೀಲರು, 4,848 ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಕ್ತ ವರ್ಷ 6,922 ಪ್ರಕರಣಗಳನ್ನು ನ್ಯಾಯಾಂಗದ ಮೂಲಕ ಮತ್ತು 8,017 ಪರಿಹಾರ ಕೇಂದ್ರಗಳ ಮೂಲಕ ಇತ್ಯರ್ಥ ಪಡಿಸಲಾಗಿದೆ. ಕಳೆದ ಜನವರಿಯಿಂದ ರಾಜ್ಯಾದ್ಯಂತ 27,506 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, 20 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿ ಪ್ರಾಧಿಕಾರದ ಸೇವೆಯನ್ನು ಪಡೆದುಕೊಳ್ಳುವ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಇದೇ ವೇಳೆ, ಕರ್ನಾಟಕವನ್ನು ಕಾನೂನು ಸೇವೆಗಳಲ್ಲಿ ದೇಶದಲ್ಲಿಯೇ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಹಿರಿಯ ನ್ಯಾಯಮೂರ್ತಿ ದಿನೇಶ್ ಕುಮಾರ್ ಮಾತನಾಡಿ, ಎಲ್ಲರಿಗೂ ನ್ಯಾಯದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ನ್ಯಾಯ ಪಡೆಯುವ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಸಮಾಜದಲ್ಲಿನ ದುರ್ಬಲ ವರ್ಗಕ್ಕೆ ಕಾನೂನು ನೆರವು ನೀಡುತ್ತಿರುವುದನ್ನು ಶ್ಲಾಘಿಸಿದರು.

ಕಾನೂನು ಸೇವೆಗಳ ಸಮಿತಿಯು ಮುಖ್ಯಸ್ಥ ನ್ಯಾಯಮೂರ್ತಿ ಕೆ.ಸೋಮಶೇಖರ್, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈ ಶಂಕರ್, ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತಿತರರಿದ್ದರು.

ಇದನ್ನೂ ಓದಿ: ಜಿಲ್ಲಾ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆ; ಮೀಸಲು ನಿಗದಿಗೆ ಅಂತಿಮ ಗಡುವು ನೀಡಿದ ಹೈಕೋರ್ಟ್

ABOUT THE AUTHOR

...view details