ಬೆಂಗಳೂರು:ದೆಹಲಿಯಲ್ಲಿ ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಳಿ ತಪ್ಪಿಸಲಾಗುತ್ತಿದೆ. ಇದು ವಿದೇಶಿ ಕೈವಾಡದಿಂದ ಪ್ರಚೋದಿತವಾಗಿರುವ ದೇಶ ವಿರೋಧಿ ಕೃತ್ಯವಾಗಿದೆ. ಇದರಲ್ಲಿ ಎಡಪಂಥೀಯ ದಲ್ಲಾಳಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ನಡೆದವು. ದೆಹಲಿ ಹಿಂಸಾಚಾರದ ವೇಳೆ ಶಾಂತಿಯುತವಾಗಿಯೇ ವರ್ತಿಸುತ್ತಿದ್ದ ಮಹಿಳಾ ಪೊಲೀಸರು ಸೇರಿ ನೂರಾರು ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದ್ದು, ಇರಿದು ಗಾಯಗೊಳಿಸಲಾಗಿದೆ. ರೈತರ ಹೆಸರಿನಲ್ಲಿ ದೇಶ ವಿರೋಧಿ ಶಕ್ತಿಗಳು ಹಾಗೂ ಎಡಪಂಥೀಯ ದಲ್ಲಾಳಿಗಳ ಪ್ರತಿಭಟನೆಯ ಪರಿ ಇದಾಗಿದೆ ಎಂದು ಹೇಳಿದ್ದಾರೆ.
ಓದಿ: ಪರಿಷತ್ನಲ್ಲಿ ಐದು ಶೈಕ್ಷಣಿಕ ವಿಧೇಯಕ ಮಂಡನೆ: ಪರ-ವಿರೋಧವಾಗಿ ವಿಸ್ತೃತ ಚರ್ಚೆ!
ಕೇಂದ್ರ ಸರ್ಕಾರವು ಕೃಷಿ ಸುಧಾರಣಾ ಮಸೂದೆಗಳನ್ನು ಜಾರಿಗೊಳಿಸುವ ಮೂಲಕ ರೈತರಿಗೆ ವಿಸ್ತೃತ ಮಾರುಕಟ್ಟೆಯ ಅವಕಾಶವನ್ನು ನೀಡಿದೆ. ರೈತರ ಉತ್ಪನ್ನಗಳಿಗೆ ಹೆಚ್ಚು ದರ ನೀಡುವಂತೆ ನೋಡಿಕೊಂಡಿದೆ. ಸುಸ್ಥಿರ ಕೃಷಿಗೂ ಅದು ಅವಕಾಶ ಮಾಡಿಕೊಡುತ್ತಿದೆ. ಪ್ರತಿಭಟನಾಕಾರರ ಭಾವನೆಗಳನ್ನು ಗೌರವಿಸಿದ ಕೇಂದ್ರ ಸರ್ಕಾರ ಹನ್ನೊಂದು ಸುತ್ತಿನ ಮಾತುಕತೆಗಳನ್ನೂ ನಡೆಸಿದೆ ಹಾಗೂ ಕಾಯ್ದೆಗಳನ್ನು ತಡೆ ಹಿಡಿದಿದೆ. ಆದರೂ ಪ್ರತಿಭಟನೆ ಹಾದಿಯಿಂದ ಹಿಂದೆ ಸರಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಸ್ಥಾಪಿತ ಹಿತಾಸಕ್ತಿಗಳು ಪ್ರಚೋದಿಸುತ್ತಿವೆ. ಈ ಪ್ರಚೋದನೆಯಿಂದ ವಿಶ್ವದ ಕೆಲವೆಡೆ ಮಹಾತ್ಮ ಗಾಂಧಿ ಅವರ ಪ್ರತಿಮೆಗಳನ್ನು ಅಪವಿತ್ರಗೊಳಿಸಲಾಗಿದೆ ಎಂದೂ ಬೇಸರ ವ್ಯಕ್ತಪಡಿಸಿದರು.