ಬೆಂಗಳೂರು: ಪ್ರೀತಿ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಯುವತಿಯ ಮೇಲೆ ಆ್ಯಸಿಡ್ ಎರಚಿದ ನಾಗರಾಜ್ ಅಲಿಯಾಸ್ ಆ್ಯಸಿಡ್ ನಾಗ ವಿಕೃತಿ ಮೆರೆದಿದ್ದ. ಇದೀಗ ಕೋರ್ಟ್‌ನಲ್ಲಿ ಈತನ ಪರ ವಕಾಲತ್ತು ವಹಿಸಲು ವಕೀಲರು ಮುಂದೆ ಬರುತ್ತಿಲ್ಲ. ಹೀಗಾಗಿ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ತಾಂತ್ರಿಕವಾಗಿ ತೊಂದರೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.
ಆ್ಯಸಿಡ್ ದಾಳಿ ಪ್ರಕರಣದ ವಿವರ: ಕಳೆದ ವರ್ಷ ಏಪ್ರಿಲ್ 28 ರಂದು ಸುಂಕದಕಟ್ಟೆ ನಿವಾಸಿಯಾಗಿರುವ ಯುವತಿಯೊಬ್ಬಳು ಪ್ರೀತಿ ನಿರಾಕರಿಸಿದ್ದಕ್ಕೆ ಕೋಪಗೊಂಡು ಆಕೆಯ ಮೇಲೆ ಸೈಕೋ ಪ್ರೇಮಿ ನಾಗರಾಜ್ ಆ್ಯಸಿಡ್ ಎರಚಿ ದುಷ್ಕೃತ್ಯವೆಸಗಿದ್ದ. ಬಳಿಕ ತಮಿಳುನಾಡಿನ ದೇವಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಯನ್ನ ಬಂಧಿಸಿ, ಕರೆ ತರುವಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆತನ ಕಾಲಿಗೆ ಗುಂಡು ಹಾರಿಸಿದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಇದಾದ ನಂತರ ಆರೋಪಿಗೆ ತ್ವರಿತವಾಗಿ ಶಿಕ್ಷೆಯಾಗಬೇಕೆಂದು ಕಾಮಾಕ್ಷಿಪಾಳ್ಯ ಪೊಲೀಸರು ಆದಷ್ಟು ಬೇಗ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಬೇಕಿದೆ. ಆದರೆ, ಹೇಯ ಕೃತ್ಯವೆಸಗಿದ ಆರೋಪಿ ನಾಗನ ಪರವಾಗಿ ಇದೀಗ ಯಾವೊಬ್ಬ ವಕೀಲರು ಕೂಡಾ ವಕಾಲತ್ತು ವಹಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ, ವಿಚಾರಣೆಗೆ ತಾಂತ್ರಿಕವಾಗಿ ತೊಡಕಾಗಿದೆ. 'ಕಾನೂನಿನಲ್ಲಿ ಆರೋಪಿ ಪರ ವಕಾಲತ್ತನ್ನು ಹಾಕದೇ ಕೇಸ್ ಚಾರ್ಜ್ ಆಗಲ್ಲ. ಆರೋಪಿಗೆ ಜಾಮೀನು ಕೂಡ ಸಿಗಲ್ಲ. ಸದ್ಯ ಈ ತಾಂತ್ರಿಕ ತೊಂದರೆಯಿಂದ ಕೇಸ್ ನಿಂತಲ್ಲೇ ನಿಂತಿದೆ. ಒಂದೆಡೆ ನಾಗನ ಪರ ವಕೀಲರೊಬ್ಬರು ವಕಾಲತ್ತು ಹಾಕಿದರೆ ಕೇಸ್ ಚಾರ್ಜ್ ಆಗಿ ಆದಷ್ಟು ಬೇಗ ಶಿಕ್ಷೆಯಾಗಲಿದೆ' ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.