ಬೆಂಗಳೂರು: ನವೆಂಬರ್ 11 ರದು ನಡೆಯಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆಗೆ ಪೂರಕವಾಗಿ ನಾಡಿನಾದ್ಯಂತ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದ್ದಾರೆ
ಪವಿತ್ರ ಮೃತ್ತಿಕೆ ಸಂಗ್ರಹ: ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದಿಂದ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಾಜಿ ಸಿಎಂ ದೇವರಾಜ ಅರಸು, ಲಾಲ್ ಬಹಾದ್ದೂರ್ ಶಾಸ್ತ್ರಿ ಸೇರಿದಂತೆ ಇತರ ಪ್ರತಿಮೆಗಳ ಬಳಿಯಿಂದ ಮಣ್ಣನ್ನು ತೆಗೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ನಾಡಿನೆಲ್ಲೆಡೆ ಪವಿತ್ರ ಮೃತ್ತಿಕೆಯನ್ನು ಸಂಗ್ರಹ ಮಾಡಲಾಗುತ್ತದೆ.
ಶುಕ್ರವಾರ ಚಾಲನೆಗೊಂಡಿರುವ ಈ ಅಭಿಯಾನ ನವೆಂಬರ್ 7 ರಂದು ಮುಕ್ತಾಯಗೊಳ್ಳಲಿದೆ. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಕೆಲವರು ಕೆಂಪೇಗೌಡರ ಬಗ್ಗೆ ಹಗುರವಾಗಿ ಮಾತಾಡ್ತಾರೆ. ಅವರೇನು ಚಕ್ರವರ್ತಿನಾ? ಅವರಿಗ್ಯಾಕೆ ಅಷ್ಟೊಂದು ಮಹತ್ವ ಅಂತಾರೆ. ಎಷ್ಟು ದೊಡ್ಡವರು ಅನ್ನೋದು ಮುಖ್ಯವಲ್ಲ. ಎಂಥ ಕೆಲಸ ಮಾಡಿದ್ದಾರೆ ಅನ್ನೋದು ಮುಖ್ಯ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ಗೆ ಟಾಂಗ್ ನೀಡಿದ ಅಶೋಕ್: ಈ ನೀರು, ನೆಲ ಕೆಂಪೇಗೌಡರ ಆಶೀರ್ವಾದದಿಂದ ಬಂದಿದೆ. ಕೆಂಪೇಗೌಡರಿಂದ ಬೆಂಗಳೂರು ಸೃಷ್ಟಿಯಾಗಿರುವುದು. ಪ್ರತಿಯೊಬ್ಬರೂ ಅವರಿಗೆ ನಮನ ಸಲ್ಲಿಸಲೇಬೇಕು. 75 ವರ್ಷ ಇಂತಹ ಕಾರ್ಯಕ್ರಮ ಯಾಕೆ ಮಾಡಿಲ್ಲ?. ಈ 75 ವರ್ಷಗಳಲ್ಲಿ ಕೆಂಪೇಗೌಡರ ಒಂದು ಪ್ರತಿಮೆ ಮಾಡಿಲ್ಲ. ಹಲವು ಸರ್ಕಾರಗಳು ಬಂದು ಹೋದರೂ ಕೆಂಪೇಗೌಡರಿಗೆ ಇಂತಹ ಗೌರವ ಸಿಕ್ಕಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ಗೆ ಟಾಂಗ್ ನೀಡಿದರು.