ಬೆಂಗಳೂರು:ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಜೊತೆಗೆ ಸಚಿವರಾಗಿ 8 ಜನ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನರು ಸಿದ್ದರಾಮಯ್ಯ ಹಾಗು ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.ತಮ್ಮ ನೆಚ್ಚಿನ ನಾಯಕರ ಪ್ರಮಾಣ ವಚನ ಕಾರ್ಯಕ್ರಮವನ್ನು ಜನತೆ ಸ್ಕ್ರೀನ್ಗಳ ಮೂಲಕ ಕಣ್ತುಂಬಿಕೊಂಡರು.
ಇನ್ನು ಸಿದ್ದರಾಮಯ್ಯ, ಡಿಕೆಶಿ ವೇದಿಕೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಅವರವರ ಅಭಿಮಾನಿಗಳು ಜಯ ಘೋಷಣೆಗಳನ್ನು ಹಾಕಿದರು. ಇಡೀ ಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನರ ಜಯಘೋಷ ಎಲ್ಲೆಡೆ ಪ್ರತಿಧ್ವನಿಸಿತು. ಕಾರ್ಯಕ್ರಮ ಆರಂಭವಾಗುವ ಮೊದಲೇ ಸಾರ್ವಜನಿಕ ಪ್ರವೇಶ ದ್ವಾರದ ಬಳಿ ನೂಕು ನುಗ್ಗಲಾಗಿ ಪೊಲೀಸರು ಲಘು ಲಾಠಿ ಚಾರ್ಜ್ ಬಳಸಿದ ಪ್ರಸಂಗವೂ ನಡೆಯಿತು. ನೂಕು ನುಗ್ಗಲು ಉಂಟಾದ ಪರಿಣಾಮ ಓರ್ವನ ಹಣೆಗೆ ಹಾಗೂ ಮತ್ತೋರ್ವನ ಹೊಟ್ಟೆಗೆ ಗಾಯವಾಗಿದೆ. ಇದೇ ವೇಳೆ ಟ್ರಾಫಿಕ್ ಇನ್ಸ್ಪೆಕ್ಟರ್ ಓರ್ವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿಯಿಂದ ಆಗಮಿಸಿದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ: ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹಾಗು ಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೆಹಲಿಯಿಂದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಆಗಮಿಸಿದರು. ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಸ್ತಾರ ವಿಮಾನದಲ್ಲಿ ಟರ್ಮಿನಲ್ 2 ಗೆ ಆಗಮಿಸಿದ ರಾಹುಲ್ ಗಾಂಧಿ ಹಾಗು ಪ್ರಿಯಾಂಕಾ ಗಾಂಧಿಯವರನ್ನು ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್ ಬರಮಾಡಿಕೊಂಡರು.