ಬೆಂಗಳೂರು: ಇನ್ನು 15 ದಿನಗಳಲ್ಲಿ ಸಾರಿಗೆ ನೌಕರರ ಪ್ರಮುಖ 3 ಬೇಡಿಕೆ ಈಡೇರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾರಿಗೆ ನೌಕರರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಅವರ 10 ಬೇಡಿಕೆಗಳ ಪೈಕಿ 9ಕ್ಕೆ ಸಹಮತ ಕೊಟ್ಟಿದ್ದೆವು. ಇದರಲ್ಲಿ ತರಬೇತಿ ಅವಧಿ 2ರಿಂದ 1 ವರ್ಷಕ್ಕೆ ಇಳಿಸಲು ಒಪ್ಪಿದ್ದೆವು. ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ಒಪ್ಪಿಗೆ ನೀಡಲಾಗಿತ್ತು. ಇದೀಗ ಬೇಡಿಕೆ ತ್ವರಿತವಾಗಿ ಈಡೇರಿಸುವಂತೆ ಸೂಚಿಸಿದ್ದೇನೆ ಎಂದರು.
ಪ್ರತಿಭಟನೆ ಮಾಡಿದ್ದ ಸಾರಿಗೆ ನೌಕರರನ್ನು ಅಮಾನತು ಮಾಡಿಲ್ಲ, ಅಪರಾಧ ಎಸಗಿದವರನ್ನು ಅಮಾನತು ಮಾಡಿದ್ದೆವು. ಸಾರಿಗೆ ನೌಕರರ ವೇತನ ಕೊಡುತ್ತೇವೆ. ಅರ್ಧ ವೇತನ ಈಗಾಗಲೇ ಕೊಟ್ಟಿದ್ದೇವೆ. ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಡಿಸೆಂಬರ್, ಜನವರಿ 2 ತಿಂಗಳ ವೇತನ ಕೊಡಲು ನಿರ್ಧರಿಸಿದ್ದೇವೆ ಎಂದರು.