ಬೆಂಗಳೂರು: ರಾಜ್ಯದಲ್ಲಿ ಕೊರೊನಾ 500ರ ಗಡಿ ದಾಟಿದ್ದರೆ, ಬೆಂಗಳೂರು ಒಂದರಲ್ಲೇ 133 ಮಂದಿಗೆ ಸೋಂಕು ಬಂದಿದೆ. ಸಾಂಸ್ಕೃತಿಕ ನಗರಿಯಲ್ಲಿ 89 ಮಂದಿ ಸೋಂಕಿತರಿದ್ದಾರೆ. ಬೆಳಗಾವಿಯಲ್ಲಿ 54, ವಿಜಯಪುರದಲ್ಲಿ 39, ಕಲಬುರುಗಿ 36 ಮಂದಿ ಕೊರೊನಾ ಪೀಡಿತರನ್ನು ಹೊಂದಿವೆ. ಇದಲ್ಲದೇ ಬಾಗಲಕೋಟೆ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಬೀದರ್, ಮಂಡ್ಯ, ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆಗಳು ಸೋಂಕಿತರ ಎರಡಂಕಿ ತಲುಪಿದೆ.
ಪ್ರವಾಸೋದ್ಯಮಕ್ಕೆ ಹೊಡೆತ:
ಕೊರೊನಾ ಅತೀ ಹೆಚ್ಚು ವ್ಯಾಪಿಸಿರುವ ಜಿಲ್ಲೆಗಳಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಇದರಿಂದ ಬರುವ ಆದಾಯದ ಒಂದಿಷ್ಟು ಪಾಲು ಸರ್ಕಾರ ಮುನ್ನಡೆಸಲು ಸಹಾಯವಾಗುತ್ತಿತ್ತು. ಆದರೆ ಕೊರೋನಾ ಅಟ್ಟಹಾಸ ಮುಗಿದರೂ, ಈ ಜಿಲ್ಲೆಗಳ ಪ್ರವಾಸಿ ತಾಣಕ್ಕೆ ಜನ ಬರಲು ವರ್ಷಗಳೇ ಬೇಕಾಗಬಹುದು. ಏಕೆಂದರೆ ಜನರ ಬಳಿ ಪ್ರವಾಸಕ್ಕೆ ವೆಚ್ಚ ಮಾಡುವಷ್ಟು ಹಣ ಇರಲ್ಲ. ಇರುವ ಹಣವನ್ನು ದೈನಂದಿನ ಜೀವನ ನಿರ್ವಹಣೆಗೆ ಬಳಸಬೇಕಾಗುತ್ತದೆ. ಪ್ರವಾಸೋದ್ಯಮ ಕ್ಷೇತ್ರ ಚಿಗುರೊಡೆಯಲು ಇನ್ನು ವರ್ಷಗಳೇ ಬೇಕಾಗಲಿವೆ ಎಂಬ ಮಾತು ಕೇಳಿಬರುತ್ತಿದೆ.
ಸಿನಿಮಾ ಕ್ಷೇತ್ರದ ಮೇಲೆ ಕೊರೊನಾ ಕರಿನೆರಳು :
ರಾಜ್ಯದ ವಿವಿಧೆಡೆ ಸಾವಿರಾರು ಚಿತ್ರಮಂದಿಗಳಿವೆ, ಇಲ್ಲಿ ಜನ ಬಂದು ಸಿನಿಮಾ ನೋಡಲು ವರ್ಷಗಳೇ ಬೇಕಾಗಬಹುದು. ಕೊರೊನಾ ಅಟ್ಟಹಾಸ ಹಿನ್ನೆಲೆ ಚಿತ್ರರಂಗ ಸುಮ್ಮನೆ ಕುಳಿತಿದೆ. ಸಿನಿಮಾ ಶೂಟಿಂಗ್, ಎಡಿಟಿಂಗ್ ನಡೆಯುತ್ತಿಲ್ಲ. ಕೊರೊನಾ ಅಟ್ಟಹಾಸ ನಿಂತ ಮೇಲೆ ಇವರ ಕೆಲಸ ಆರಂಭವಾಗಿ ಚಿತ್ರ ಸಿದ್ಧಗೊಂಡು ಬಿಡುಗಡೆಯಾಗಲು ತಿಂಗಳುಗಳೇ ಹಿಡಿಯಲಿದೆ.
ಆಭರಣ ಮಳಿಗೆಗಳಿಗೆ ನಷ್ಟ :
ಭಾರತೀಯರು ಆಭರಣ ಪ್ರಿಯರು. ಚಿನ್ನ, ಬೆಳ್ಳಿ, ವಜ್ರದ ಆಭರಣ ಖರೀದಿಸಲು ಸಕಾಲವಾಗಿದ್ದ ಸಮಯವನ್ನು ಕೊರೊನಾ ತಿಂದು ಹಾಕಿದೆ. ವಿವಾಹ, ಅಕ್ಷಯ ತೃತೀಯಕ್ಕೆ ಸಮಯ ಜಾರಿ ಹೋಗಿದೆ. ಇದರಿಂದ ಆಭರಣ ಕೊಳ್ಳಲು ಜನರ ಬಳಿ ಮೊದಲನೇಯದಾಗಿ ಹಣವಿಲ್ಲ, ಇನ್ನು ಒತ್ತಾಯಕ್ಕೆ ಕೊಳ್ಳೋಣ ಎಂದರೂ ಅಂತಹ ಕೊಳ್ಳುವ ದಿನವಿಲ್ಲ.
ಬೆಂಗಳೂರು ನಗರ ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಪ್ರಕಾರ, ಜನ ಕೈಲಿ ಹಣವಿದ್ದಾಗ ಪ್ರವಾಸ ತೆರಳುತ್ತಾರೆ. ಏಪ್ರಿಲ್, ಮೇ ತಿಂಗಳು ಜನ ಪ್ರವಾಸ ಕೈಗೊಳ್ಳುವ ಸಂದರ್ಭ. ಲಕ್ಷಾಂತರ ರೂ. ವಹಿವಾಟು ಆಗುತ್ತದೆ. ಜೂನ್ ತಿಂಗಳು ಮಳೆಗಾಲ ಆರಂಭವಾದರೆ ಪ್ರವಾಸಕ್ಕೆ ತೆರಳುವವರು ಕಡಿಮೆ. ಇದು ಸಕಾಲವಾಗಿತ್ತು. ಆದರೆ ಕೊರೊನಾ ಹಿನ್ನೆಲೆ ಎಲ್ಲವೂ ನಿಂತಿದೆ. ಇನ್ನು ವಾರಾಂತ್ಯ ಮಸ್ತಿಗೆ ವಾಹನ ಮಾಡಿಸಿಕೊಂಡು ನಗರದಿಂದ ಹೊರ ಹೋಗುತ್ತಿದ್ದ ಸಾವಿರಾರು ಟೆಕ್ಕಿಗಳು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಅನೇಕ ಎಂಎನ್ಸಿ ಕಂಪನಿಗಳು ಸಿಬ್ಬಂದಿಗೆ ಅರ್ಧ ಸಂಬಳ ನೀಡುತ್ತಿವೆ. ಜನರಿಗೆ ಜೀವನ ನಿರ್ವಹಣೆಯೇ ಕಷ್ಟಸಾಧ್ಯವಾಗಿರುವಾಗ, ಹಾಗಾಗಿ ಪ್ರವಾಸ ಅಸಾಧ್ಯ ಎನ್ನುತ್ತಾರೆ.