ಬೆಂಗಳೂರು: ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಪ್ರಾಣಾಪಾಯದಿಂದ ಸಂರಕ್ಷಿಸಿ ಜೀವ ಉಳಿಸಿದ ಕೆಎಸ್ಆರ್‌ಟಿಸಿ ಬಸ್ ಚಾಲಕ ಮಂಜುನಾಥ್ ಕಾರ್ಯ ಮೆಚ್ಚಿ, ಸಾರಿಗೆ ನಿಗಮ 10 ಸಾವಿರ ರೂ ನಗದು ಬಹುಮಾನ ನೀಡಿ ಗೌರವಿಸಿದೆ. ತುಮಕೂರು ವಿಭಾಗದ ಶಿರಾ ಘಟಕದ ಚಾಲಕ ಮಂಜುನಾಥ್ ತುಮಕೂರು ಮಾರ್ಗದಲ್ಲಿ ಬಸ್ ಚಾಲನೆ ಮಾಡುತ್ತಿದ್ದರು. ಈ ವೇಳೆ, ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮುಳುಗುತ್ತಿರುವ ವಿಚಾರ ತಿಳಿದು ಬಸ್ ನಿಲ್ಲಿಸಿ, ತಕ್ಷಣ ನೀರಿಗೆ ಹಾರಿ ಅವರನ್ನು ಕಾಪಾಡಿದ್ದರು.
ಇದೀಗ ಮಾನವೀಯ ಕಾರ್ಯ ಮೆಚ್ಚಿ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅವರು ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಮಂಜುನಾಥ್ ಹಾಗು ಅವರ ಕುಟುಂಬವನ್ನು ಆಹ್ವಾನಿಸಿ, 10,000 ನಗದು ಪುರಸ್ಕಾರ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮಾತನಾಡಿ, "ಜಗತ್ತಿನಲ್ಲಿ ಇನ್ನೂ ಮಾನವೀಯ ಮೌಲ್ಯಗಳು ಉಳಿದಿವೆ ಎನ್ನುವುದಕ್ಕೆ ನಮ್ಮ ಚಾಲಕ ಮಂಜುನಾಥ್ ಜೀವಂತ ಉದಾಹರಣೆ. ಈಜು ಬರುವ ಎಷ್ಟೋ ಜನ ದಿಢೀರ್ ನೀರಿನಲ್ಲಿ ಧುಮುಕಿ, ಇತರರ ಪ್ರಾಣ ಉಳಿಸುವ ಕಾರ್ಯ ಮಾಡಲು ಹಲವು ಬಾರಿ ಯೋಚಿಸುತ್ತಾರೆ, ಹಿಂಜರಿಯುತ್ತಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.