ಬೆಂಗಳೂರು:ಕರ್ನಾಟಕ ರೇಷ್ಮೆ ಉದ್ಯಮ ನಿಗಮ ನಿಯಮಿತ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸುಮಾರು 1 ಕೋಟಿ ರೂ ಚೆಕ್ನ್ನು ಸಿಎಂ ಅವರಿಗೆ ನೀಡಿದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 'ಕೆಎಸ್ಐಸಿ ಸಿಲ್ಕ್'ನಿಂದ 1 ಕೋಟಿ ರೂ. ದೇಣಿಗೆ - ದೇಣಿಗೆ ಸಲ್ಲಿಕೆ
ಇತ್ತೀಚೆಗೆ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಸಂಭವಿಸಿದ್ದ ಪ್ರವಾಹ ಮತ್ತು ನೆರೆ ಹಾವಳಿಯಿಂದ ಸಂತ್ರಸ್ತರಾದ ಜನರ ಸಂಕಷ್ಟಕ್ಕೆ ನೆರವಾಗಲು ಕರ್ನಾಟಕ ರೇಷ್ಮೆ ಉದ್ಯಮ ನಿಗಮ ನಿಯಮಿತ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸುಮಾರು 1 ಕೋಟಿ ರೂ. ದೇಣಿಗೆ ನೀಡಲಾಯಿತು. ಇದೇ ವೇಳೆ ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಮತ್ತು ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆಗಳು ಕೂಡ ಪರಿಹಾರ ಮೊತ್ತವನ್ನು ಸಲ್ಲಿಸಿದವು.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಭೇಟಿ ನೀಡಿದ ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕೆ.ಎಸ್.ಐ.ಸಿ. ವ್ಯವಸ್ಥಾಪಕ ನಿರ್ದೇಶಕಿ ನೀಲಾ ಮಂಜುನಾಥ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪರಿಹಾರ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು.
ವಿವಿಧ ಸಂಘ- ಸಂಸ್ಥೆಗಳಿಂದ ಸಿಎಂ ನಿಧಿಗೆ ಹರಿದು ಬಂತ್ತು ಹಣ:
ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಅವರು ಸುಮಾರು 20 ಲಕ್ಷ ರೂ. ಚೆಕ್ ಅನ್ನು ಮುಖ್ಯಮತ್ರಿಗಳಿಗೆ ನೀಡಿದರು. ಜೊತೆಗೆ ಕ್ಯಾನ್ ಫಿನ್ ಹೋಮ್ಸ್ ವತಿಯಿಂದ ಸಿಇಒ ರಾಜಶೇಖರ್ ಅವರು ಸುಮಾರು 25 ಲಕ್ಷ ರೂ. ದೇಣಿಗೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಗೆ ನೀಡಿದರು.