ಸಾತನೂರು ಗ್ರಾಮದ ಹೈಟೆಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆ ಯಲಹಂಕ(ಬೆಂಗಳೂರು): ಖಾಸಗಿ ಶಾಲೆಗಳ ಭರಾಟೆಗೆ ಸಿಲುಕಿ ಇತ್ತೀಚಿನ ದಿನಗಳಲ್ಲಿ ಕೆಲ ಸರ್ಕಾರಿ ಶಾಲೆಗಳು ಅಳಿವಿನ ಅಂಚಿಗೆ ತಲುಪುತ್ತಿವೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಹೈಟೆಕ್ ಖಾಸಗಿ ಶಾಲೆಗಳ ಹೊಡೆತದಿಂದಾಗಿ ಸರ್ಕಾರಿ ಶಾಲೆಗಳು ಸೊರಗುತ್ತಿವೆ. ಹೀಗೆ ಯಾವುದೇ ಸೌಲಭ್ಯಗಳಿಲ್ಲದೇ ಬಡವಾಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದನ್ನು ಯಲಹಂಕ ಬಳಿಯ ಸಾತನೂರು ಗ್ರಾಮದಲ್ಲಿ ಶಾಸಕ ಕೃಷ್ಣ ಭೈರೇಗೌಡ ಜೊತೆ ಸೇರಿಕೊಂಡು ಸ್ಥಳೀಯರೇ ಉನ್ನತೀಕರಿಸಿದ್ದಾರೆ.
ಒಂದರಿಂದ 7ನೇ ತರಗತಿವರೆಗೆ ಈ ಶಾಲೆಯಲ್ಲಿ ಸುಮಾರು 160 ಮಕ್ಕಳಿದ್ದು, ಅಳಿವಿನ ಅಂಚಿಗೆ ತಲುಪಿತ್ತು. ಶಾಲೆಗೆ ಬರಲು ನಗರದ ಮಕ್ಕಳು ಹಿಂದೇಟು ಹಾಕುತ್ತಿದ್ದರು. ಹೀಗಾಗಿ, ಶಾಸಕ ಕೃಷ್ಣ ಭೈರೇಗೌಡ ಹಾಗೂ ಗ್ರಾಮದ ಮುಖಂಡರು ಸುಮಾರು 50 ಲಕ್ಷಕ್ಕೂ ಹೆಚ್ಚು ಹಣ ಹಾಕಿ ಶಾಲೆಯನ್ನು ಹೈಟೆಕ್ ಮಾದರಿಯಲ್ಲಿ ಪರಿವರ್ತನೆ ಮಾಡಿದ್ದಾರೆ. ಉನ್ನತೀಕರಿಸಿದ ಶಾಲೆಯನ್ನು ಇಂದು ಕೃಷ್ಣ ಭೈರೇಗೌಡ ಉದ್ಘಾಟಿಸಿದರು.
ಇದನ್ನೂ ಓದಿ:ಶಾಲಾ ಮಕ್ಕಳಿಗೆ ದೈನಂದಿನ ಪಾಠದ ಜೊತೆಗೆ ವ್ಯಾಪಾರದ ಜ್ಞಾನಕ್ಕಾಗಿ ನಡೆದ ಮೆಟ್ರಿಕ್ ಮೇಳ
ಮಕ್ಕಳ ಸಂತಸ:ಖಾಸಗಿ ಶಾಲೆಗಳು ನಾಚುವಂತೆ ಉನ್ನತೀಕರಿಸಿದ ಸಾತನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡೆಸ್ಕ್ ಸೇರಿದಂತೆ ಕೆಲ ಪಿಠೋಪಕರಣಗಳನ್ನು ಗ್ರಾಮದ ದಾನೇಗೌಡ ಹಾಗೂ ಭೈರೇಗೌಡ ಎನ್ನುವವರು ದಾನ ನೀಡಿದ್ದು, ಮಕ್ಕಳು ಸಂತಸಗೊಂಡಿದ್ದಾರೆ.
4 ಕೋಟಿ ರೂ ವೆಚ್ಚದ ಕಾಮಗಾರಿ: ಇಂದು ಸಾತನೂರು ಗ್ರಾಮದಲ್ಲಿ ಶಾಲೆ ಉದ್ಘಾಟನೆ ಸೇರಿದಂತೆ 4 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೃಷ್ಣ ಭೈರೇಗೌಡ ನೇರವೇರಿಸಿದರು. ಸರ್ಕಾರಿ ಶಾಲೆಗೆ 40 ಲಕ್ಷ ರೂ ಅನುದಾನ ಕೂಡ ನೀಡಿದ್ದಾರೆ. ಉಳಿದ ಪೀಠೋಪಕರಣಗಳ ವೆಚ್ಚವನ್ನು ಗ್ರಾಮಸ್ಥರೇ ಭರಿಸಿದ್ದು, ಖಾಸಗಿ ಶಾಲೆಗಳು ನಾಚುವಂತೆ ನುರಿತ ಶಿಕ್ಷಕರನ್ನು ನೇಮಿಸಲಾಗಿದೆ.
ಇದನ್ನೂ ಓದಿ:ದಾಖಲೆ ಇದೆಯಾ ನೋಡಿ, ಇಲ್ಲದಿದ್ರೆ ವಿಧಾನಸೌಧವನ್ನೇ ಮಾರಾಟ ಮಾಡ್ತಾರೆ: ಕೃಷ್ಣ ಭೈರೇಗೌಡ ಆತಂಕ
ಬಳಿಕ ಮಾತನಾಡಿದ ಶಾಸಕ ಕೃಷ್ಣ ಭೈರೇಗೌಡ, "ಸರ್ಕಾರಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಬೇಕು. ಹಾಗಾಗಿ, ಸಾತನೂರು ಗ್ರಾಮದಲ್ಲಿ ಇಂದು ಖಾಸಗಿ ಶಾಲೆಯಲ್ಲಿ ಏನೆಲ್ಲಾ ಸೌಲಭ್ಯಗಳಿರುತ್ತೋ ಅದಕ್ಕಿಂತ ಉತ್ತಮವಾದ ಶಾಲಾ ಕೊಠಡಿಗಳು ಮತ್ತು ಆವರಣವನ್ನು ಅಭಿವೃದ್ಧಿ ಮಾಡಿ, ಸರ್ಕಾರಿ ಶಾಲೆಯಲ್ಲಿ ಓದುವಂತಹ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಶಾಲೆಯಲ್ಲಿನ ಹಳೇ ಕಟ್ಟಡಗಳನ್ನು ತೆಗೆದು ಹೊಸ ಕಟ್ಟಡ ಕಟ್ಟಿದ್ದೇವೆ. ಹಾಗೆಯೇ, ಈ ಪಂಚಾಯಿತಿಗೆ ಸೇರಿದ ಕೆಲ ಊರು ಮತ್ತು ಬಡಾವಣೆಗಳಲ್ಲಿ ರಸ್ತೆ, ಬೀದಿ ದೀಪ ಅಭಿವೃದ್ಧಿಗೆ ವಿಶೇಷವಾದ ಅನುದಾನ ಕೊಟ್ಟು, ಇಂದು ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೇವೆ" ಎಂದರು.