ಬೆಂಗಳೂರು: ರಾಜ್ಯದಲ್ಲಿ ಮಾದಕ ದ್ರವ್ಯ ಮಾರಾಟ ಜಾಲವನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮನವಿ ಮಾಡಿದ್ದಾರೆ.
ಈ ಸಂಬಂಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಅವರು, ಬೆಂಗಳೂರಿನಲ್ಲಿ ಮಾದಕವಸ್ತು ಕಳ್ಳಸಾಗಣೆ ದಂಧೆಯನ್ನು ಕಾನೂನು ಜಾರಿ ಸಂಸ್ಥೆಗಳು ಭೇದಿಸಿರುವುದು ಆಗಲೇ ತಮ್ಮ ಗಮನಕ್ಕೆ ಬಂದಿದೆ ಎಂದು ನಂಬಿದ್ದೇನೆ. ದಂಧೆ ಮತ್ತು ಅದರ ಪ್ರಮಾಣದ ಬಗ್ಗೆ ವರದಿಗಳು ಭಯಾನಕವಾಗಿವೆ. ಮಾದಕ ವಸ್ತುಗಳನ್ನು ವಿದೇಶದಿಂದ ದೇಶಕ್ಕೆ ತರಲಾಗುತ್ತಿದೆ ಮತ್ತು ಬಹಳ ವ್ಯವಸ್ಥಿತವಾಗಿ ದೇಶಾದ್ಯಂತ ವಿತರಿಸಲಾಗುತ್ತಿದೆ. ಆದ್ದರಿಂದ, ದಂಧೆಯಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ಮಾರಾಟ ಮಾಫಿಯಾ ಲಿಂಕ್ಗಳು ಇರಬೇಕು ಎಂಬ ಅನುಮಾನ ತಮ್ಮದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳಿಂದ ಹಿಡಿದು ಚಲನಚಿತ್ರ ತಾರೆಯರವರೆಗೆ ಎಲ್ಲ ವರ್ಗದ ಜನ ಡ್ರಗ್ಸ್ಗೆ ಗ್ರಾಹಕರಾಗಿದ್ದಾರೆ. ಮಾದಕ ವಸ್ತುಗಳ ಲಭ್ಯತೆಯು ರಹಸ್ಯವಾಗಿ ಆದರೂ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರ ಜೀವನವನ್ನು ಹಾಳು ಮಾಡುತ್ತಿದೆ. ಪ್ರತಿಯಾಗಿ ಅವರ ಇಡೀ ಕುಟುಂಬ ತೊಂದರೆಗೆ ಈಡಾಗುತ್ತಿದೆ. ವ್ಯಸನಿಗಳು ಮಾದಕ ದ್ರವ್ಯದ ಮಾದಕತೆಯಂತೆ ಸಮಾಜಕ್ಕೆ ಕಂಟಕಪ್ರಾಯರಾಗಿ ಪರಿಣಮಿಸುತ್ತಿದ್ದಾರೆ.