ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೆರೆ ಹಾನಿ ವೀಕ್ಷಣೆಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಎರಡು ದಿನ ಪ್ರವಾಸ ಕೈಗೊಂಡಿದ್ದು, ಆಗಸ್ಟ್ 24 ಮತ್ತು 25 ರಂದು ಬೆಳಗಾವಿ, ಚಿಕ್ಕೋಡಿ, ಜಮಖಂಡಿ, ಮುಧೋಳ್ ಹಾಗೂ ಬಾಗಲಕೋಟೆಗೆ ಭೇಟಿ ನೀಡಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೆರೆಯಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳು ಹಾಗೂ ನಾಗರಿಕರನ್ನು ಗುರುತು ಮಾಡಿ, ಅಲ್ಲಿಗೆ ಭೇಟಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಇದು ಸಂಭ್ರಮಿಸುವ ಸಮಯವಲ್ಲ. ಹಾಗಾಗಿ ನೆರೆ ವೀಕ್ಷಣೆಯ ಸಮಯದಲ್ಲಿ ಭಾಗವಹಿಸುವ ಕಾರ್ಯಕರ್ತರು ಹಾರಗಳನ್ನು ಹಾಕಿ ಮುಜುಗರದ ವಾತಾವರಣ ಸೃಷ್ಟಿಸದೇ ಸಹಕರಿಸಬೇಕೆಂದು ವಿನಂತಿಸಿಕೊಂಡರು.
ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಎಲ್ಲೆಡೆ ಆತಂಕದ ವಾತಾವರಣವಿದೆ. ನೆರೆ ವೀಕ್ಷಣೆ ವೇಳೆ ಹೆಚ್ಚು ಜನ ಒಂದೆಡೆ ಸೇರಿದಂತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆಯೂ ತಿಳಿಸಲಾಗಿದೆ.
ನೆರೆ ವೀಕ್ಷಣೆ ಮಾರ್ಗ:
ಆಗಸ್ಟ್ 24ರಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಡಲಿದ್ದು, ನೇರವಾಗಿ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಗೋಕಾಕ್ ತಾಲೂಕಿನ ಅರವಂಜಿ ಪ್ರದೇಶಕ್ಕೆ ಭೇಟಿ ನೀಡಿ, ನೆರೆ ಸಮಸ್ಯೆ ಪ್ರದೇಶಗಳನ್ನು ವೀಕ್ಷಿಸಿ, ಅಲ್ಲಿನ ಜನರ ಅಹವಾಲು ಸ್ವೀಕರಿಸಲಿದ್ದಾರೆ.
ನಂತರ ಅರಬಾವಿಗೂ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಬೆಳಗಾವಿಯ ಘಟಪ್ರಭಾ ತರಬೇತಿ ಶಿಬಿರದ ವೀಕ್ಷಣೆ ಮಾಡಲಿರುವ ಡಿಕೆಶಿ, ಬೆಳಗಾವಿ ಗ್ರಾಮಾಂತರ, ನಗರ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸಭೆ ನಡೆಸಲಿದ್ದಾರೆ. ಪಕ್ಷ ಸಂಘಟನೆಗೆ ಅಗತ್ಯವಿರುವ ಮಾರ್ಗದರ್ಶನ ಸೂಚನೆಗಳನ್ನೂ ಅವರು ಈ ವೇಳೆ ನೀಡಲಿದ್ದಾರೆ. ನಂತರ ಬೆಳಗಾವಿಗೆ ಮರಳಿ ಅಲ್ಲಿಯೇ ತಂಗಲಿರುವ ಮಾಹಿತಿ ದೊರೆತಿದೆ.
ಎರಡನೇ ದಿನದ ಪ್ರವಾಸದಲ್ಲಿ ಬೆಳಗಾವಿಯಿಂದ ನೇರವಾಗಿ ಜಮಖಂಡಿಗೆ ತೆರಳಲಿದ್ದು, ಅಲ್ಲಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿಯೂ ಪರಿಶೀಲಿಸಲಿದ್ದಾರೆ. ಅಲ್ಲಿಂದ ಮುಧೋಳಗೆ ಆಗಮಿಸಿ, ಅಲ್ಲಿನ ಜನರ ಸಮಸ್ಯೆ ಆಲಿಸಲಿದ್ದಾರೆ.
ಅಲ್ಲಿಂದ ಬಾಗಲಕೋಟೆಗೆ ತೆರಳಿ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ ಬಾದಾಮಿಗೆ ತೆರಳಿ ಅಲ್ಲಿನ ಸಮಸ್ಯೆ ಪರಿಶೀಲಿಸಿ, ನಂತರ ರಾತ್ರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಬಳಿಕ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ, ಮಾತುಕತೆ ನಡೆಸಲಿದ್ದಾರೆ.
ಎರಡು ದಿನ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಈ ಸಂಬಂಧ ಸರ್ಕಾರಕ್ಕೆ ಮಾಹಿತಿ ನೀಡುವ ಹಾಗೂ ಆ ಭಾಗದ ಜನರ ನೆರವಿಗೆ ಬರುವಂತೆ ಒತ್ತಡ ಹೇರುವ ಕಾರ್ಯ ಮಾಡಲಿದ್ದಾರೆ.