ಬೆಂಗಳೂರು:ಈಗ್ಯಾಕೆ ಅನರ್ಹರಿಗೆ ನಮ್ಮ ವಿಚಾರ. ಅವರು ಪಕ್ಷ ಬಿಟ್ಟಾಯಿತು. ಸರ್ಕಾರ ಬೀಳಿಸಿದ್ದೂ ಆಯಿತು. ಅವರನ್ನು ಪಕ್ಷದಿಂದ ಉಚ್ಛಾಟಿಸಿಯೂ ಆಯಿತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅನರ್ಹ ಶಾಸಕರ ಬಗ್ಗೆ ಕಿಡಿ ಕಾರಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರ್ಎಂವಿ 2ನೇ ಹಂತದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನರ್ಹ ಶಾಸಕರು, ಸಿದ್ದರಾಮಯ್ಯ ಮತ್ತು ತಮ್ಮ ವಿರುದ್ಧ ಕಿಡಿಕಾರುತ್ತಿದ್ದಾರೆ. ಅವರಿಗೆ ಈಗ್ಯಾಕೆ ನಮ್ಮ ಚಿಂತೆ. ಅವರು ಎಲ್ಲಿದ್ದಾರೋ ಅಲ್ಲೇ ಚೆನ್ನಾಗಿರಲಿ. ಅಲ್ಲೇ ಮಂತ್ರಿಗಳಾಗಿರಲಿ. ಆದರೆ ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಪಕ್ಷಕ್ಕೆ ವಾಪಸ್ ಕರೆದುಕೊಳ್ಳೋದಿಲ್ಲ. ನಾವೆನು ಅಧಿಕಾರಕ್ಕಾಗಿ ಪಕ್ಷ ಬಿಟ್ಟು ಹೋಗಲ್ಲ. ಈಗ ಇಂತಹ ಕ್ಷುಲ್ಲಕ ವಿಚಾರ ಮಾತಾಡುವುದು ಸರಿಯಲ್ಲ. ನಮ್ಮ ಪಕ್ಷದ ಬಗ್ಗೆ ಬಹಳ ಪ್ರೀತಿ ಇರುವ ರೀತಿ ಈಗ ಮಾತಾಡೋದು ಯಾಕೆ ಎಂದು ಪ್ರಶ್ನಿಸಿದರು.
ಎಷ್ಟೋ ಜನ ಪಕ್ಷದಿಂದ ಏನೂ ಪಡೆದುಕೊಳ್ಳದೇ ಇದ್ದವರೂ ಪಕ್ಷಕ್ಕೆ ನಿಷ್ಠರಾಗಿ ಇದ್ದಾರೆ. ಆದರೆ ನೀವು ಮಂತ್ರಿಗಳಾಗಿ ಅಧಿಕಾರ ಅನುಭವಿಸಿ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕೇಂದ್ರ ಚುನಾವಣಾ ಆಯೋಗದ ನಡವಳಿಕೆ ನಿಜಕ್ಕೂ ಸಾಕಷ್ಟು ಅನುಮಾನ ಮೂಡಿಸುತ್ತಿದೆ ಎಂದು ಅಭಿಪ್ರಾಯಪಟ್ಟ ಗುಂಡೂರಾವ್, ಚುನಾವಣಾ ಆಯೋಗ ನಡೆದುಕೊಳ್ತಿರೋ ರೀತಿಯನ್ನು ನಾನು ನಿನ್ನೆ ಖಂಡಿಸಿದ್ದೆ. ಒಮ್ಮೆ ಅನರ್ಹ ಶಾಸಕರು ಸ್ಪರ್ಧೆ ಮಾಡಬಹುದು ಅನ್ನುತ್ತಾರೆ. ಚುನಾವಣೆ ಮುಂದೂಡಲು ಅಭ್ಯಂತರ ಇಲ್ಲ ಅನ್ನುತ್ತಾರೆ. ಚುನಾವಣೆ ಮುಂದೂಡಿಕೆ ಆದ ನಂತರ ಮತ್ತೆ ಚುನಾವಣೆಗೆ ದಿನಾಂಕ ಘೋಷಣೆ ಮಾಡುತ್ತಾರೆ. ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚುನಾವಣಾ ಆಯೋಗ ಕೆಲಸ ಮಾಡ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ನೀತಿ ಸಂಹಿತೆ ಜಾರಿ ವಿಳಂಬವೇಕೆ?
ಚುನಾವಣೆ ಘೋಷಣೆ ಮಾಡಿ, ನೀತಿ ಸಂಹಿತೆ ಮಾತ್ರ ನವೆಂಬರ್ 11ರಿಂದ ಜಾರಿ ಅಂತಾರೆ. ಅಂದರೆ ಸರ್ಕಾರ ಅಲ್ಲಿವರೆಗೂ ಏನು ಬೇಕಾದ್ರೂ ಮಾಡಬಹುದು. ಚುನಾವಣಾ ಆಯೋಗ ಯಾವಾಗಲೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಈಗ ನೀತಿ ಸಂಹಿತೆ ಜಾರಿಯಾಗುವ ದಿನಾಂಕದವರೆಗೂ ಆ ಕ್ಷೇತ್ರಗಳಲ್ಲಿ ಜನರಿಗೆ ಸರ್ಕಾರ ಆಮಿಷ ಒಡ್ಡುತ್ತದೆ. ಸರ್ಕಾರಿ ಯಂತ್ರ ದುರುಪಯೋಗ ಆಗುವ ಸಾಧ್ಯತೆ ಇದೆ. ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಥರಾ ವರ್ತಿಸುತ್ತಿದೆ. ಆಯೋಗ ಬಿಜೆಪಿಯ ಸದಸ್ಯತ್ವ ತೆಗೆದುಕೊಂಡ ರೀತಿ ನಡೆದುಕೊಳ್ಳುತ್ತಿದೆ. ಚುನಾವಣಾ ಆಯೋಗ ಬಿಜೆಪಿಯವರು ಹೇಳಿದಂತೆ ನಡೆದುಕೊಳ್ತಿದೆ. ಚುನಾವಣಾ ಆಯೋಗ ತನ್ನ ಸ್ವಾಯತ್ತತೆ ಕಳೆದುಕೊಂಡಿದೆ ಎಂದು ದೂರಿದರು.
ಚುನಾವಣೆಯನ್ನೇ ಮುಕ್ತವಾಗಿ ನಡೆಸಲು ಸಾಧ್ಯವಾಗದೆ ಇದ್ದ ಪಕ್ಷದಲ್ಲಿ ಆಯೋಗ ಯಾಕೆ ಬೇಕು? ಐಟಿ, ಇಡಿ, ಸುಪ್ರೀಂ ಕೋರ್ಟ್ ಎಲ್ಲವೂ ಸ್ವಾಯತ್ತತೆ ಕಳೆದುಕೊಂಡರೆ ನಮ್ಮ ಗತಿಯೇನು? ವ್ಯವಸ್ಥೆ ಎಲ್ಲಿಗೆ ಹೋಗಿ ಮುಟ್ಟುತ್ತಿದೆ. ಹಿಟ್ಲರ್ ಆಡಳಿತ ದೇಶದಲ್ಲಿ ಮತ್ತೆ ಜಾರಿಯಾಗ್ತಿದೆ ಅನಿಸುತ್ತಿದೆ. ಸೋಮವಾರ ಚುನಾವಣಾ ಆಯೋಗಕ್ಕೆ ಮನವಿ ಕೊಡುತ್ತೇವೆ. ನೀತಿ ಸಂಹಿತೆ ಕೂಡಲೇ ಜಾರಿ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.
ಯಾರೂ ಧೈರ್ಯ ತೋರಿಸುತ್ತಿಲ್ಲ
ಯಾರೂ ಕೂಡಾ ವಿರೋಧ ವ್ಯಕ್ತಪಡಿಸುವ ಧೈರ್ಯ ಮಾಡುತ್ತಿಲ್ಲ. ವಿರೋಧ ವ್ಯಕ್ತಪಡಿಸಿದ್ರೆ ಜೈಲಿಗೆ ಹಾಕ್ತಾರೆ. ಒಂದು ರೀತಿಯ ಪೊಲೀಸ್ ರಾಜ್ಯ, ಗೂಂಡಾ ರಾಜ್ಯ, ಐಟಿ ರಾಜ್ಯ ಆಗುತ್ತಿದೆ ಎಂದು ಹೇಳಿದರು.
ರಮ್ಯಾ ವಿಚಾರ ಪ್ರಸ್ತಾಪ
ನಟಿ ರಮ್ಯಾ ಅವರನ್ನು ಎಐಸಿಸಿ ಸೋಷಿಯಲ್ ಮೀಡಿಯಾದಿಂದ ತೆಗೆದ ಹಿನ್ನೆಲೆ ಕುರಿತು ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ಅವರೇ ಆಕ್ಟೀವ್ ಇರಲಿಲ್ಲ. ಹಾಗಾಗಿ ಬೇರೆಯವರನ್ನ ನೇಮಿಸಿರಬಹುದು. ಈ ಬಗ್ಗೆ ಸ್ಪಷ್ಟನೆ ನೀಡಬೇಕು. ನನಗೆ ಹೆಚ್ಚಿನ ಮಾಹಿತಿ ಇಲ್ಲ. ಅವರು ಬೆಂಗಳೂರಿನಲ್ಲಿದ್ದಾರೋ, ದಿಲ್ಲಿಯಲ್ಲಿದ್ದಾರೆಯೇ ಎಂಬ ಮಾಹಿತಿ ಕೂಡ ನನಗೆ ಇಲ್ಲ ಎಂದರು.