ಬೆಂಗಳೂರು:ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 141 ಮಂದಿ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಗರದ ರೇಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ದೇಶದ ಪ್ರಜಾಪ್ರಭುತ್ವವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ ದಿನನಿತ್ಯ ಕಗ್ಗೊಲೆ ಮಾಡುತ್ತಿದೆ. ದೇಶದ ಸಂಸತ್ ಭವನದ ಒಳಗೆ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳು ಒಳ ನುಗ್ಗಿ ದಾಂದಲೆ ನಡೆಸಿದನ್ನು ಖಂಡಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದರೆ, ಅವರನ್ನು ಅಮಾನತುಗೊಳಿಸಿ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಭದ್ರತಾ ವೈಫಲ್ಯವನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಇಬ್ಬರೂ ಸಹ ಮರೆಮಾಚುತಿದ್ದಾರೆ. ಇಡೀ ಜಗತ್ತಿಗೆ ಇದು ಜಗಜ್ಜಯಿರವಾಗಿದೆ. ದೇಶದ ರಕ್ಷಣೆ ವಿಷಯದಲ್ಲಿ ಮೋದಿ ಸರ್ಕಾರ ವಿಫಲವಾಗಿರುವುದು ಎದ್ದು ಕಾಣುತ್ತಿದೆ. ದೇಶದ ಸಂಸತ್ ಭವನಕ್ಕೆ ರಕ್ಷಣೆ ನೀಡಲು ಇವರು ಸಂಪೂರ್ಣ ವಿಫಲರಾಗಿದ್ದಾರೆ. ಪ್ರಧಾನಮಂತ್ರಿ ಹಾಗೂ ಗೃಹ ಸಚಿವರು ಇದಕ್ಕೆ ಹೊಣೆ ಹೊರಬೇಕು. ಇದರ ಬಗ್ಗೆ ಲೋಕಸಭೆ ಒಳಗೆ ಸ್ಪಷ್ಟ ಉತ್ತರ ನೀಡಲು ಇಬ್ಬರು ವಿಫಲರಾಗಿದ್ದಾರೆ ಹಾಗೂ ಪಲಾಯನವಾದವನ್ನು ಮಾಡುತ್ತಿದ್ದಾರೆ ಎಂದು ಮನೋಹರ್ ದೂರಿದರು.