ಬೆಂಗಳೂರು:ರಾಜ್ಯಸಭೆ ಸದಸ್ಯತ್ವಕ್ಕೆ ಮೊನ್ನೆಯಷ್ಟೇ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಮುಖಂಡರಾದ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ ರಾಮಮೂರ್ತಿ ಇದೀಗ ನವದೆಹಲಿಯಲ್ಲಿ ಬಿಜೆಪಿ ಸೇರಿದ್ದಾರೆ. ಸ್ವಪ್ರೇರಣೆಯಿಂದ ಬಿಜೆಪಿ ಸೇರಿದ್ದೇನೆ. ಯಾರ ಒತ್ತಡವೂ ತಮ್ಮ ಮೇಲಿರಲಿಲ್ಲವೆಂದು ರಾಮಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸೇರಿದ ಮಾಜಿ ಸಂಸದ ಕೆ.ಸಿ ರಾಮಮೂರ್ತಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಕಮಲವನ್ನು ಹಿಡಿದ ರಾಮಮೂರ್ತಿಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಪಕ್ಷಕ್ಕೆ ಬರಮಾಡಿಕೊಂಡರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜ್ಯಸಭೆ ಸದಸ್ಯತ್ವಕ್ಕೆ ರಾಮಮೂರ್ತಿ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿ ಸೇರಲಿದ್ದಾರೆಂದು ಹೇಳಲಾಗಿತ್ತು. ಅದರಂತೆ ರಾಜೀನಾಮೆ ನೀಡಿದ ಬೆರಳೆಣಿಕೆ ದಿನಗಳಲ್ಲೇ ಕೆ.ಸಿ ರಾಮಮೂರ್ತಿ ಬಿಜೆಪಿ ತೆಕ್ಕೆಗೆ ಜಾರಿದ್ದಾರೆ.
ರಾಜ್ಯಸಭೆಯಲ್ಲಿ ಬಹುಮತ ಪಡೆಯಬೇಕೆನ್ನುವ ಬಿಜೆಪಿಯ ತಂತ್ರಗಾರಿಕೆಗೆ ರಾಮಮೂರ್ತಿ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವುದು ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ರಾಮಮೂರ್ತಿ, ರಾಜ್ಯಸಭೆಗೆ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.