ಬೆಂಗಳೂರು: ಕೆಎಎಸ್ ಅಧಿಕಾರಿ ಡಾ.ಬಿ ಸುಧಾ ಅವರ ಆಸ್ತಿಯ ರಹಸ್ಯವನ್ನು ಎಸಿಬಿ ಜಾಲಾಡಿದಷ್ಟು ಹಲವಾರು ಮಾಹಿತಿಗಳು ಹೊರಬರುತ್ತಿವೆ.
ಎಸಿಬಿ ಇನ್ನೂ ಕೂಡ ಕೋಟಿ ಕೋಟಿ ಆಸ್ತಿ ವಿಚಾರದ ಬಗ್ಗೆ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಆಸ್ತಿ, ಚಿನ್ನಾಭಾರಣ, ಆಪ್ತರ ಆಸ್ತಿ ಇವುಗಳನ್ನ ಲೆಕ್ಕ ಮಾಡಿದಷ್ಟು ಹಲವಾರು ಮಾಹಿತಿಗಳು ತಿಳಿದು ಬರುತ್ತಿವೆ. ಇಂದು ಎಸಿಬಿ ಎಸ್ಪಿ ಕುಲ್ದೀಪ್ ಜೈನ್ ಅವರ ಎದುರು ಸುಧಾ ವಿಚಾರಣೆಗೆ ಹಾಜರಾಗಲಿದ್ದಾರೆ. ಮತ್ತೊಂದೆಡೆ ಸುಧಾ ಅವರ ಅತ್ತೆ ಮನೆಯಲ್ಲೂ ಕೂಡ ಆಸ್ತಿ ಪತ್ರಗಳು ಹಾಗೂ ಚಿನ್ನಾಭರಣ ಲಭ್ಯವಾಗಿವೆ ಎನ್ನಲಾಗ್ತಿದೆ.
ಬಗೆದಷ್ಟು ಚಿನ್ನ, ಆಸ್ತಿ.. ಕೆಎಎಸ್ ಅಧಿಕಾರಿ ಡಾ.ಬಿ ಸುಧಾ ವಿರುದ್ಧ ಮುಂದುವರೆದ ತನಿಖೆ ಸುಧಾ ತನ್ನ ಹೆಸರಿನಲ್ಲಿ ಮಾತ್ರವಲ್ಲದೇ ತನ್ನ ಆಪ್ತೆ ಸ್ನೇಹಿತರ ಮುಖಾಂತರ ರಿಯಲ್ ಎಸ್ಟೇಟ್ ಹೀಗೆ ಹಲವು ಕಡೆ ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಎಲ್ಲಾ ಆಸ್ತಿಯ ವಿವರ ಎಸಿಬಿ ಪಡೆಯಬೇಕಾದದ್ದು ಅನಿವಾರ್ಯವಾಗಿದೆ. ಇಂದು ವಿಚಾರಣೆ ವೇಳೆ ಜಪ್ತಿ ಮಾಡಿದಾಗ ಸಿಕ್ಕಿದ ಅಕ್ರಮ ಆಸ್ತಿಯ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ. ಸದ್ಯ ನೂರಾರು ಕೋಟಿ ಮೌಲ್ಯದ ಆಸ್ತಿ ಪತ್ರಗಳು ಕೂಡ ಪತ್ತೆಯಾಗಿವೆ ಎನ್ನಲಾಗ್ತಿದೆ. ಸುಧಾ ಅವರು ಬಿಡಿಎ ಭೂ ಸ್ವಾಧೀನ ಅಧಿಕಾರಿಯಾಗಿದ್ದ, ವೇಳೆ ಅಕ್ರಮ ಆಸ್ತಿ ಮಾಡಿದ್ದಾರೆ. ಎಸಿಬಿ ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ಸುಧಾ ಅವರ ಆಸ್ತಿಯ ಸಂಪೂರ್ಣ ಮಾಹಿತಿ ಎಷ್ಟೆಂಬುದನ್ನು ಪತ್ತೆ ಹಚ್ಚಲು ಎಸಿಬಿ ಇನ್ನೂ ತನಿಖೆಯಲ್ಲಿ ತೊಡಗಿದೆ.
ಪ್ರಕರಣ: ಕೆಎಎಸ್ ಅಧಿಕಾರಿಯಾಗಿರುವ ಸುಧಾ ಅಕ್ರಮವಾಗಿ ಆಸ್ತಿ ಗಳಿಸಿದ ಕಾರಣ 2019 ರಲ್ಲಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಎಸಿಬಿಗೆ ದೂರು ನೀಡಿದ್ದರು. ಕಳೆದ ಜನವರಿಯಲ್ಲಿ ಮತ್ತೆ ದೂರು ನೀಡಿದ್ದು, ತದ ನಂತರ ಜೂನ್ನಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ತನಿಖೆ ನಡೆಸುವಂತೆ ಎಸಿಬಿಗೆ ತಿಳಿಸಿತ್ತು. ಹಾಗೆ ಸುಧಾಗೆ ಮೇಲಾಧಿಕಾರಿಗಳು ಭ್ರಷ್ಟಾಚಾರ ಕುರಿತು ವಾರ್ನ್ ಮಾಡಿದ್ದರು. ಯಾರ ಮಾತಿಗೂ ಕಿಮ್ಮತ್ತು ಕೊಡದೆ ಹಣಕ್ಕೆ ಬೇಡಿಕೆ ಇಟ್ಟು ಅಕ್ರಮ ಆಸ್ತಿಗಳಿಸಿದ ವಿಚಾರ ಬಯಲಾಗಿದೆ.