ಬೆಂಗಳೂರು: ರಾಜ್ಯ ವನ್ಯಜೀವಿ ಮಂಡಳಿಗೆ ಕಾನೂನು ಸಚಿವರನ್ನು ಕಾಯಂ ಸದಸ್ಯರನ್ನಾಗಿ ಮಾಡುವ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಗುರುವಾರ ನಡೆದ 16ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಗೆ ಹಲವು ಪ್ರಸ್ತಾವನೆಗಳು ಬರುತ್ತವೆ. ಆದರೆ, ಅವುಗಳಿಗೆ ಎದುರಾಗುವ ಕಾನೂನು ತೊಡಕುಗಳ ಬಗ್ಗೆ ಆಲೋಚನೆ ಮಾಡಿರುವುದಿಲ್ಲ. ಆದ್ದರಿಂದ ಸಭೆಗೆ ಕಾನೂನು ಸಚಿವರು ಸದಸ್ಯರಾಗಿದ್ದಲ್ಲಿ ಎದುರಾಗುವ ಕಾನೂನು ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಅಧಿಕಾರಿಗಳ ವಿರುದ್ಧ ತರಾಟೆ:ಅರಣ್ಯ ಇಲಾಖೆಯಲ್ಲಿ ಇರುವ ಸುಮಾರು 35ಕ್ಕೂ ಹೆಚ್ಚು ಹಿರಿಯ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಂಗಳೂರು ನಗರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಕ್ರಮಕ್ಕೆ ಮುಖ್ಯಮಂತ್ರಿಗಳು ತೀವ್ರ ತರಾಟೆ ತೆಗೆದುಕೊಂಡರು. ಹಿರಿಯ ಅಧಿಕಾರಿಗಳು ಬೆಂಗಳೂರಿನ ಕಚೇರಿಯಲ್ಲಿರುವುದರಿಂದ ಅರಣ್ಯದಲ್ಲಿನ ಮೂಲ ಸಮಸ್ಯೆಗಳ ಪರಿಹಾರಕ್ಕೆ ತೊಡಕಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಯಾವುದೇ ಸಮಸ್ಯೆ ಹಾಗೂ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆಗಳು ಬಂದಲ್ಲಿ ಖುದ್ದು ಭೇಟಿ ನೀಡಿ ಸಮಾಲೋಚನೆ ನಡೆಸಬೇಕು. ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಫೈಬರ್ ಆಪ್ಟಿಕಲ್ ಕೇಬಲ್ ಅಳವಡಿಕೆಗೆ ಅನುಮತಿ:ಕುದುರೆಮುಖ ವನ್ಯಜೀವಿಧಾಮ, ಸೋಮೇಶ್ವರ ವನ್ಯಜೀವಿಧಾಮ, ಚಿಂಚೋಳಿ ವನ್ಯಜೀವಿಧಾಮ, ಶೆಟ್ಟಿಹಳ್ಳಿ ವನ್ಯಜೀವಿಧಾಮ, ಶರಾವತಿ ಸಿಂಗಲೀಕ ವನ್ಯಜೀವಿಧಾಮ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮಲೈಮಹದೇಶ್ವರ ವನ್ಯಜೀವಿಧಾಮದ ಸುತ್ತಮುತ್ತಲ ಗ್ರಾಮಗಳಿಗೆ ಮೊಬೈಲ್ ಮತ್ತು ಅಂತರ್ಜಾಲ ಸಂಪರ್ಕ ಕಲ್ಪಿಸಲು ಜಿಯೋ ಫೈಬರ್ ಆಪ್ಟಿಕಲ್ ಕೇಬಲ್‌ನ್ನು ನೆಲದಡಿಯಲ್ಲಿ ಅಳವಡಿಸುವುದಕ್ಕೆ ಒಪ್ಪಿಗೆ ನೀಡಿರುವ ಸಭೆ, ಈ ಭಾಗದ ಅರಣ್ಯ ಇಲಾಖೆಗೆ ಉಚಿತ ಸೇವೆ ಒದಗಿಸಬೇಕು ಎಂಬ ಷರತ್ತನ್ನು ವಿಧಿಸಿದೆ.
ಅರಣ್ಯದಲ್ಲಿ ಎಲಿವೇಟೆಡ್ ಕಾರಿಡಾರ್ ಪ್ರಸ್ತಾವನೆಗೆ ತಿರಸ್ಕಾರ:ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಾಣ ಮಾಡುವ ಸಲುವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಪ್ರಸ್ತಾವನೆಯನ್ನು ಸಭೆ ತಿರಸ್ಕರಿಸಿದೆ.
ಬನ್ನೇರುಘಟ್ಟ ಅರಣ್ಯದಲ್ಲಿ ಎಲಿವೇಟೆಡ್ ಕಾರಿಡಾರ್ ಮಾಡಿದಲ್ಲಿ ಮುಂದೆ ಬಂಡೀಪುರದಲ್ಲಿ ಕೇರಳ ರಾಜ್ಯ ಸಂಪರ್ಕಿಸುವ ರಸ್ತೆಗೂ ಅನುಮತಿ ನೀಡಬೇಕಾಗುತ್ತದೆ. ಆಗ ವನ್ಯಜೀವಿ ಸಂಕುಲಕ್ಕೆ ತೀವ್ರತರದ ಹಾನಿಯಾಗಲಿದೆ ಎಂದು ಸಭೆಯಲ್ಲಿದ್ದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದನ್ನು ಪರಿಗಣಿಸಿದ ಮುಖ್ಯಮಂತ್ರಿಗಳು ಪ್ರಸ್ತಾವನೆ ಕೈಬಿಡುವಂತೆ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಆಂಬ್ಯುಲೆನ್ಸ್ ಖರೀದಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಭೂಮಿ ನೀಡಲು ಸಂಪುಟ ಅಸ್ತು