ಬೆಂಗಳೂರು: ಅಧಿಕಾರಕ್ಕೆ ಬಂದು ಎರಡು ತಿಂಗಳು ಪೂರೈಸುವುದಕ್ಕಿಂತ ಮುನ್ನ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಸೇರಿದಂತೆ ಎರಡು ತಿಂಗಳಲ್ಲಿ ಸಾವಿರಾರು ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ಮೂಲಕ ಸಿಎಂ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಂಬರ್ ಒನ್ ‘ಟ್ರಾನ್ಸ್‌ಫರ್ ಸರ್ಕಾರ ’ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಮೈತ್ರಿ ಸರ್ಕಾರ ಪತನಗೊಂಡು ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದ ಪ್ರಾರಂಭವಾದ ವರ್ಗಾವಣೆ ಪ್ರಕ್ರಿಯೆ, ಕರ್ನಾಟಕದ ಇತಿಹಾಸದಲ್ಲಿ ಯಾವೊಂದು ಸರ್ಕಾರವೂ ಅಧಿಕಾರಕ್ಕೆ ಬರಬರುತ್ತಿದ್ದಂತೆಯೇ ಇಷ್ಟೊಂದು ಪ್ರಮಾಣದಲ್ಲಿ ವರ್ಗಾವಣೆ ನಡೆಸಿರಲಿಲ್ಲ ಎಂಬ ದಾಖಲೆ ಬರೆದಂತಿದೆ. ವಿಧಾನಸೌಧದ ಸಚಿವಾಲಯಗಳಲ್ಲೂ ಭಾರೀ ಪ್ರಮಾಣದ ನೌಕರರನ್ನು ವರ್ಗಾವಣೆ ಮಾಡಲಾಗಿದ್ದು, ನಿರ್ದಿಷ್ಟ ಜಾಗಕ್ಕೆ ಇಂತಿಂತವರೇ ಬರಬೇಕು ಎಂದು ಸರ್ಕಾರ ಬಯಸಿರುವುದು ಸ್ಪಷ್ಟವಾಗಿದೆ. ಇನ್ನು ಶಿಕ್ಷಣ ಇಲಾಖೆಯ ವರ್ಗಾವಣೆಗಳು ಅಧಿಕಾರಿಗಳ ಮಟ್ಟದಲ್ಲೇ ನಡೆಯುವುದರಿಂದ ಈ ದಾಖಲೆಯಲ್ಲಿ ಶಿಕ್ಷಕರು ಸೇರ್ಪಡೆಯಾಗಿಲ್ಲ.
ರಾಜ್ಯದಲ್ಲಿ ನೆರೆ ಬಂದು ಸುಮಾರು 35 ಸಾವಿರ ಕೋಟಿ ರೂ. ಗಳಷ್ಟು ನಷ್ಟವಾದರೂ ಪರಿಹಾರದ ರೂಪದಲ್ಲಿ ಕೇವಲ 431 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಉಳಿದಂತೆ ಕೇಂದ್ರ ಸರ್ಕಾರ ಇನ್ನೂ ಅಂಗೈಯಲ್ಲೇ ಪರಿಹಾರದ ಬೆಣ್ಣೆ ತೋರಿಸುತ್ತಿದೆ. ರೈತರ ಸಾಲ ಮನ್ನಾ ಸೇರಿದಂತೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೈಗೊಂಡ ನಿರ್ಣಯಗಳಿಗೆ ಹಣ ಒದಗಿಸಿರುವುದು ಸೇರಿದಂತೆ ವಿವಿಧ ಬಾಬ್ತುಗಳಿಗೆ ನಿಗದಿಯಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಕಷ್ಟವಾಗಿದ್ದು, ಇದು ಕೂಡಾ ಯಡಿಯೂರಪ್ಪ ಸರ್ಕಾರದ ಮುಂದಿನ ದಾರಿಯನ್ನು ಅಸ್ಪಷ್ಟಗೊಳಿಸಿದೆ.