ಬೆಂಗಳೂರು: ನಾವು ಬಸವರಾಜ ಬೊಮ್ಮಾಯಿ ಅವರ ಬಜೆಟ್ ಅನ್ನು ಸ್ವಲ್ಪ ಮಾರ್ಪಾಡಿಸಿ ಮಂಡಿಸಿದ್ದೇವೆ. ಹೀಗಾಗಿ ಈ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಪ್ರತ್ಯೇಕವಾಗಿ ಹೆಚ್ಚಿನ ಅನುದಾನ ನೀಡಲು ಮತ್ತು ಈ ನೀರಾವರಿ ಯೋಜನೆಗಳಿಗೆ ರೈತರಿಂದ ವಶಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರದ ಹಣ ನೀಡಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಮಂಗಳವಾರ ನಿಯಮ 72ರ ಅಡಿ ಬಿಜೆಪಿ ಸದಸ್ಯ ಹನುಮಂತ ನಿರಾಣಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಡಿಕೆಶಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಪ್ರತ್ಯೇಕವಾಗಿ ಹೆಚ್ಚಿನ ಅನುದಾನ ನೀಡಬೇಕು. ನೀರಾವರಿ ಯೋಜನೆಗಳಿಗೆ ರೈತರಿಂದ ವಶಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರ ನೀಡುವ ಹಾಗೂ ಪುನರ್ವಸತಿ ಕೇಂದ್ರಗಳ ಕಾಮಗಾರಿ ಮತ್ತೆ ಚಾಲನೆ ನೀಡಲು ಹನುಮಂತ ನಿರಾಣಿ ಪ್ರಸ್ತಾಪಿಸಿದ್ದಾರೆ. ಸದಸ್ಯರು ಹೇಳಿದ ಮಾತಿನಲ್ಲಿ ಸತ್ಯವಿದೆ. ಸಂತ್ರಸ್ತರಿಗೆ ಎಷ್ಟು ಹಣ ನೀಡಬೇಕು ಎಂಬುದರ ಬಗ್ಗೆ ಬಹಳ ದಿನಗಳಿಂದ ತೀರ್ಮಾನ ಆಗಬೇಕಿತ್ತು.
ಬಾಗಲಕೋಟೆ ಭಾಗದಲ್ಲಿ 2-3 ಲಕ್ಷ ಇದ್ದರೂ 10-15 ಲಕ್ಷಕ್ಕೆ ಮಾಡಲಾಗಿತ್ತು. ಹೀಗಾಗಿ ಸಮಸ್ಯೆ ಆಗಿತ್ತು. ನಾವು ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಅನ್ನು ಸ್ವಲ್ಪ ಮಾರ್ಪಾಡು ಮಾಡಿ ಮಂಡಿಸಿದ್ದೇವೆ. ಹೀಗಾಗಿ ಈ ವರ್ಷ ಇದಕ್ಕೆ ಹಣ ನೀಡಲು ಆಗುತ್ತಿಲ್ಲ. ಆದರೂ ಇದು ಆದ್ಯತೆ ಯೋಜನೆ ಆಗಿದ್ದು, ನಾನು ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಬಾಕಿ ಇರುವ ಅಧಿಸೂಚನೆ ಸರಿಪಡಿಸುವಂತೆ ಮನವಿ ಮಾಡಿದ್ದೇನೆ. ಸದನ ಮುಗಿಯುವ ಒಳಗೆ ಈ ವಿಚಾರವಾಗಿ ಮಾತನಾಡಲು ಸಭೆ ಮಾಡುತ್ತೇನೆ. ನಿಮ್ಮನ್ನು ಸೇರಿದಂತೆ ಈ ಭಾಗದ ನಾಯಕರನ್ನು ಆಹ್ವಾನಿಸಿ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಆ ಸಭೆಯಲ್ಲಿ ನಿಮ್ಮ ಸಲಹೆಗಳನ್ನು ಹಂಚಿಕೊಳ್ಳಿ ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ :ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೆ.ಸೆಟ್ ಅನ್ನು ಇನ್ನು ಮುಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನಡೆಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಇವರ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಾದ ಕೆ.ಸೆಟ್ ಕಳೆದ ಎರಡು ವರ್ಷಗಳಿಂದ ನಡೆಯದಿರುವ ಬಗ್ಗೆ ಸರ್ಕಾರದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವರು ಅರ್ಹತೆ ಹೊಂದಿರುವ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆಯನ್ನು ಕೆಇಎ ಮೂಲಕ ನಡೆಸಲು ಸರ್ಕಾರ ಕ್ರಮ ಕೈಗೊಂಡಿದೆ. ಯುಜಿಸಿಯ ಸಾಮಾನ್ಯ ಪ್ರಕ್ರಿಯೆ ಪೂರ್ಣಗೊಂಡ ನಂತರ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.
ವಿಶ್ವಕರ್ಮ ಸಮುದಾಯದವರಿಗೂ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ:ವಿಶ್ವಕರ್ಮ ಸಮಾಜದವರಿಗೆ ಸಹ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಅವಕಾಶ ಕಲ್ಪಿಸಲು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಅಧಿನಿಯಮ 1997ಕ್ಕೆ ತಿದ್ದುಪಡಿ ಮಾಡಲಾಗುವುದೆಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ಅವರು ವಿಶ್ವಕರ್ಮ ಸಮುದಾಯದವರಿಗೆ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಆವಕಾಶ ಮಾಡಕೊಡುವ ಕುರಿತ ಗಮನ ಸೆಳೆಯುವ ಉತ್ತರಿಸಿದ ಸಾರಿಗೆ ಸಚಿವರು, ಅಧಿನಿಯಮದಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ನಾಲ್ಕು ಸದಸ್ಯರನ್ನು ಆಡಳಿತ ಮಂಡಳಿಯಲ್ಲಿ ಸೇರಿಸಿಕೊಳ್ಳಲು ಅವಕಾಶವಿದ್ದು, ಅದರಲ್ಲಿ ವಿಶ್ವಕರ್ಮ ಸಮುದಾಯದವರನ್ನೂ ಪರಿಗಣಿಸಲಾಗುವುದು ತಿಳಿಸಿದರು.
ಇದನ್ನೂ ಓದಿ:ಜೈನಮುನಿ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಸರ್ಕಾರ ನಕಾರ: ಸದನದ ಬಾವಿಗಿಳಿದು ಧರಣಿ ನಡೆಸಿದ ಬಿಜೆಪಿ