ಬೆಂಗಳೂರು: ಖಾಸಗಿ ಕಂಪನಿಯೊಂದರಲ್ಲಿ ತನ್ನ ಗುತ್ತಿಗೆ ಅವಧಿ ಮುಗಿಯುವ 3 ದಿನಗಳ ಮುನ್ನ ಕಂಪನಿಯ ವ್ಯವಸ್ಥಾಪಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪದಲ್ಲಿ ಮಹಿಳೆಯೊಬ್ಬರು ಸಲ್ಲಿಸಿದ್ದ ದೂರನ್ನು ಹೈಕೋರ್ಟ್ ರದು ಪಡಿಸಿದೆ. ಮೈಂಡ್ ಟ್ರೀ ಕಂಪನಿಯ ಡೆಲಿವರಿ ಸೆಂಟರ್ ಮ್ಯಾನೇಜರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 354(ಎ) ಮತ್ತು 420ರ ಅಡಿ ದಾಖಲಿಸಿದ್ದ ದೂರನ್ನು ಹಾಗೂ ವಿಚಾರಣೆ ರದ್ದುಗೊಳಿಸಿದೆ. ದೂರು ಪರಿಶೀಲಿಸಿದ ಬಳಿಕ ಯಾವ್ಯಾವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಉಲ್ಲೇಖಿಸಿರುವ ಬಗ್ಗೆ ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿದೆ.
ನ್ಯಾಯಾಲಯ ಮೈಂಡ್ ಟ್ರೀ ಕಚೇರಿ, ಕೋರಮಂಗಲದ ಫೋರಂ ಮಾಲ್ ಮತ್ತು ಎಂ.ಜಿ ರಸ್ತೆಯ ಬಾರ್ಟನ್ ಸೆಂಟರ್ ಎಲ್ಲ ಜಾಗಗಳು ಸಾರ್ವಜನಿಕ ಮುಕ್ತ ಪ್ರದೇಶಗಳಾಗಿವೆ. ಈ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ಆರೋಪಿಸಿರುವುದು ಕೇವಲ ಆರೋಪವಷ್ಟೇ ಅಲ್ಲ, ಹೆಚ್ಚು ಅಸಂಭವವಾದ ಆರೋಪವಾಗಿದೆ ಎಂದು ಪೀಠ ತಿಳಿಸಿದೆ.
ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿ ಪರಿಶೀಲಿಸಿದರೆ, ಅದರಲ್ಲಿ ಅರ್ಜಿದಾರರು ಮಹಿಳೆಯನ್ನು ಚುಂಬಿಸಲು ಅವರನ್ನು ಮುಟ್ಟಲು ಯತ್ನಿಸಿದ್ದರೆಂದು ಆರೋಪಿಸಿದ್ದಾರೆ. ಆದರೆ ಆರೋಪ ಪಟ್ಟಿಯಲ್ಲಾಗಲಿ ಅಥವಾ ದೂರಿನಲ್ಲಾಗಲಿ ಇದನ್ನು ಪುಷ್ಠೀಕರಿಸುವ ಯಾವ ಅಂಶಗಳೂ ಇಲ್ಲ. ಮತ್ತು ಅವರ ಘನತೆಗೂ ಕುಂದಾಗಿಲ್ಲ. ಹಾಗಾಗಿ ಅರ್ಜಿದಾರರ ವಿರುದ್ಧ ಆರೋಪ ಸಮರ್ಥನೀಯವಲ್ಲ. ಆದ್ದರಿಂದ ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಎರಡೂ ಆರೋಪಗಳಿಗೂ ಯಾವುದೇ ಆಧಾರವಿಲ್ಲದ ಕಾರಣ ದೂರು ಮತ್ತು ಆರೋಪ ಪಟ್ಟಿ ಎರಡೂ ಸ್ವೀಕಾರಾರ್ಹವಲ್ಲ. ವಿಚಾರಣಾ ನ್ಯಾಯಲಯ ಅರ್ಜಿದಾರರ ಅರ್ಜಿಯನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕಿತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅರ್ಜಿದಾರರ ವಿರುದ್ಧ ಪ್ರಕರಣ ಮುಂದುವರಿಸಿದರೆ ಅದು ನ್ಯಾಯಾಂಗದ ದುರ್ಬಳಕೆ ಆಗಲಿದೆ ಎಂದು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ .
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ:ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರ ತನಿಖಾ ದಳ(ಸಿಬಿಐ) ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಹೊರಡಿಸಿರುವ ಆದೇಶವನ್ನು ಮಾ. 24ರವರೆಗೆ ವಿಸ್ತರಿಸಿ ಹೈಕೋರ್ಟ್ ಆದೇಶಿಸಿದೆ. ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣ ಮತ್ತು ಈ ಸಂಬಂಧ ನಡೆಯುತ್ತಿರುವ ತನಿಖೆ ರದ್ದು ಕೋರಿ ಡಿ.ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ.
ಇದಕ್ಕೂ ಮುನ್ನ ವಿಚಾರಣೆ ವೇಳೆ, ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿ, ಅರ್ಜಿದಾರರ ವಿರುದ್ಧದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರಿಂದ ತನಿಖೆಗೆ ತೊಂದರೆಯಾಗುತ್ತಿದೆ. ಹೀಗಾಗಿ ತಡೆಯಾಜ್ಞೆ ತೆರವು ಕೋರಿ ಸಿಬಿಐ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಗಣಿಸಬೇಕು. ಜತೆಗೆ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಆದರೆ, ಈ ಮನವಿಯ ಕುರಿತು ವಿಚಾರಣೆ ನಡೆಸಲು ಕಾಲಾವಕಾಶದ ಕೊರತೆಯ ಕಾರಣ ಅರ್ಜಿ ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿದ ನ್ಯಾಯಪೀಠ, ಅಲ್ಲಿಯವರೆಗೆ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿರುವ ತಡೆಯಾಜ್ಞೆ ಮುಂದುವರೆಯಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಡಿಕೆ ಶಿವಕುಮಾರ್ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ವಿಚಾರಣೆ ಮುಂದೂಡಿದ ಹೈಕೋರ್ಟ್