ಬೆಂಗಳೂರು: ರಾಜ್ಯ ಸರ್ಕಾರ ತನ್ನ ಪ್ರಮುಖ ತೆರಿಗೆ ಮೂಲವಾದ ವಾಣಿಜ್ಯ ತೆರಿಗೆ ಮೂಲಕ ಭರ್ಜರಿ ಆದಾಯ ಸಂಗ್ರಹ ಮಾಡಿದೆ. ಕಳೆದ ಆರು ತಿಂಗಳಲ್ಲಿ 47,435.05 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಿದೆ.
2022-23 ಸಾಲಿನಲ್ಲಿ ರಾಜ್ಯ ಸರ್ಕಾರ ನಿರೀಕ್ಷೆಗಿಂತ ಹೆಚ್ಚಿನ ಆದಾಯ ಸಂಗ್ರಹ ಮಾಡುತ್ತಿದೆ. ಕೋವಿಡ್ ಲಾಕ್ ಡೌನ್ ಏಟಿನ ಬಳಿಕ ಆರ್ಥಿಕತೆ ಚೇತರಿಸಿಕೊಂಡಿದ್ದು, ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ ಕಂಡಿದೆ. ಅದರಲ್ಲೂ ಪ್ರಮುಖ ಆದಾಯ ಮೂಲವಾದ ವಾಣಿಜ್ಯ ತೆರಿಗೆ ನಿರೀಕ್ಷೆಗಿಂತ ಭರಪೂರ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಬಂದಿದೆ.
ಜಿಎಸ್ಟಿ ಹಾಗೂ ತೈಲ ಮೇಲಿನ ಮಾರಾಟ ತೆರಿಗೆ ಮೂಲಕ ರಾಜ್ಯ ಭರ್ಜರಿ ಆದಾಯ ಸಂಗ್ರಹ ಮಾಡಿದೆ. 2022-23 ಸಾಲಿನಲ್ಲಿ 77,010 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸುವ ಅಂದಾಜು ಮಾಡಲಾಗಿದೆ. ಮೊದಲಾರ್ಧ ವರ್ಷದಲ್ಲಿ ರಾಜ್ಯ ಸರ್ಕಾರ ಉತ್ತಮ ಆದಾಯ ಸಂಗ್ರಹಿಸಿದೆ. ಕಳೆದ ಬಾರಿಗಿಂತ ಈ ಬಾರಿ ಆರು ತಿಂಗಳಲ್ಲಿ 2,724.68 ಕೋಟಿ ರೂ. ಹೆಚ್ಚುವರಿ ವಾಣಿಜ್ಯ ತೆರಿಗೆ ಸಂಗ್ರಹ ಮಾಡಲಾಗಿದೆ.
ನಿರೀಕ್ಷೆ ಮೀರಿ ಜಿಎಸ್ಟಿ ಸಂಗ್ರಹ:ರಾಜ್ಯ ಸರ್ಕಾರ ಈ ಬಾರಿ ನಿರೀಕ್ಷೆಗಿಂತಲೂ ಹೆಚ್ಚಿಗೆ ಜಿಎಸ್ಟಿ ಸಂಗ್ರಹ ಮಾಡುತ್ತಿದೆ. ಈ ಆರ್ಥಿಕ ವರ್ಷದಲ್ಲಿ 53,220 ಕೋಟಿ ರೂ. ಜಿಎಸ್ಟಿ ಸಂಗ್ರಹ ನಿರೀಕ್ಷೆ ಮಾಡಲಾಗಿದೆ. ಮೊದಲಾರ್ಧ ವರ್ಷದಲ್ಲಿ 37,211.53 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ.
2021-22ನೇ ಸಾಲಿನಲ್ಲಿ ಈ ಅವಧಿಯಲ್ಲಿ 34,457.71 ಕೋಟಿ ಜಿಎಸ್ಟಿ ಸಂಗ್ರಹ ಮಾಡಲಾಗಿತ್ತು. ಈ ವರ್ಷ 2,759.82 ಕೋಟಿ ರೂ. ಹೆಚ್ಚುವರಿ ಜಿಎಸ್ಟಿ ಸಂಗ್ರಹ ಮಾಡಲಾಗಿದೆ. ಇನ್ನುಳಿದ ಆರು ತಿಂಗಳಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಗಣನೀಯ ಏರಿಕೆ ಕಾಣಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಜೆಟ್ ಅಂದಾಜನ್ನು ಮೀರಿ ಈ ಬಾರಿ ಜಿಎಸ್ಟಿ ಸಂಗ್ರಹವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.