ಬೆಂಗಳೂರು:ಹೊಸ ವರ್ಷದ ನಿಮಿತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಶುಭಾಶಯ ಕೋರಿದರು. ಹೊಸ ವರ್ಷದಲ್ಲಿ ಆಡಳಿತಕ್ಕೆ ಇನ್ನಷ್ಟು ಚುರುಕು ಮುಟ್ಟಿಸಿ, ಜನಪರ ಆಡಳಿತ ನೀಡಲು ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಯಾವುದೇ ರೀತಿಯಲ್ಲೂ ಚಿಂತೆಗೀಡಾಗದೇ ಕೆಲಸ ಮಾಡಿ. ನಿಮ್ಮ ಕರ್ತವ್ಯದಲ್ಲಿ ನಾನು ಯಾವುದೇ ರೀತಿಯಲ್ಲೂ ಮಧ್ಯ ಪ್ರವೇಶಿಸಲ್ಲ. ಜನರ ಪರವಾದ ಆಡಳಿತ ನಡೆಸಿ, ನಿಮ್ಮ ಜೊತೆ ನಾನಿದ್ದೇನೆ. ನೀವೆಲ್ಲರೂ ಆಡಳಿತದಲ್ಲಿ ಅಪಾರ ಅನುಭವ ಹೊಂದಿದವರಾಗಿದ್ದೀರಿ. ನಿಮ್ಮ ಉದ್ದೇಶ ಸರಿ ಇರಲಿ, ಯಾವುದೇ ಒತ್ತಡಕ್ಕೆ ಒಳಗಾಗದೇ ನಿರ್ಭಯವಾಗಿ ಕೆಲಸ ಮಾಡಿ. ಎಲ್ಲ ಒಳ್ಳೆಯದಾಗಲಿ ಎಂದು ಸಂದೇಶ ನೀಡಿದರು.
ಮಕ್ಕಳಿಗೆ ಲಸಿಕೆ:
15ರಿಂದ 18 ವರ್ಷದವರಿಗೆ ಲಸಿಕೆ ನೀಡುವ ವಿಚಾರವಾಗಿ ಮಾತನಾಡಿದ ಸಿಎಂ, ನಾಡಿದ್ದು ಲಸಿಕೆ ಅಭಿಯಾನ ಪ್ರಾರಂಭ ಆಗುತ್ತಿದೆ. ನಾವೆಲ್ಲರೂ ಅಭಿಯಾನದಲ್ಲಿ ಭಾಗವಹಿಸುತ್ತಿದ್ದು, ಯಶಸ್ವಿಯಾಗಿ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿ ಹಾಗೂ ಕೋವಿಡ್ ಜಿಲ್ಲಾ ಉಸ್ತುವಾರಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಅವರು ಕೂಡ ಆಯಾ ಜಿಲ್ಲೆಯಲ್ಲೇ ಲಸಿಕೆ ಅಭಿಯಾನದಲ್ಲಿ ಭಾಗವಹಿಸುತ್ತಾರೆ ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ರಾಜ್ಯ ಪೊಲೀಸ ಮಹಾ ನಿರ್ದೇಶಕ ಪ್ರವೀಣ ಸೂದ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.