ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ 20ನೇ ಚಿತ್ರ ಸಂತೆ ಸಂದರ್ಭದಲ್ಲಿ ಪ್ರೊ. ಕೆ ಲಕ್ಷ್ಮ ಗೌಡ ಅವರಿಗೆ ಪ್ರೊ. ಎಂಎಸ್ ನಂಜುಂಡ ರಾವ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಿಎಂ ಎಸ್ಎಂ ಕೃಷ್ಣ ಪ್ರಶಸ್ತಿ ಪ್ರದಾನ ಮಾಡಿದರು. ಉನ್ನತ ಶಿಕ್ಷಣ ಇಲಾಖೆ ಸಹಾಯದೊಂದಿಗೆ ಆಯೋಜಿಸಿದ್ದ ಸಮಾರಂಭದಲ್ಲಿ, ಕೆ ಲಕ್ಷ್ಮ ಗೌಡಗೆ ನಂಜುಂಡ ರಾವ್ ಪ್ರಶಸ್ತಿ ನೀಡುವ ಜೊತೆಗೆ ಇತರ ನಾಲ್ವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹೆಚ್‌ಕೆ ಕೇಜ್ರಿವಾಲ್ ಪ್ರಶಸ್ತಿಯನ್ನು ಪೋಲೆಂಡ್ ಮೂಲದ ವಿಮರ್ಶಕಿ ಮಾರ್ತಾ ಯಾಕಿಮೋವಿಝ್ ಅವರಿಗೆ, ಎಂ ಆರ್ಯ ಮೂರ್ತಿ ಪ್ರಶಸ್ತಿಯನ್ನು ಪ್ರೊ. ರಜಿನಿ ಪ್ರಸನ್ನ ಅವರಿಗೆ, ಡಿ ದೇವರಾಜ ಅರಸು ಪ್ರಶಸ್ತಿ ಶಾಂತಾಮಣಿ ಅವರಿಗೆ ಹಾಗೂ ವೈ ಸುಬ್ರಹ್ಮಣ್ಯ ರಾಜು ಪ್ರಶಸ್ತಿಯನ್ನು ಕೆ ವಿಠ್ಠಲ್ ಭಂಡಾರಿ ಅವರಿಗೆ ನೀಡಿ ಗೌರವಿಸಲಾಯಿತು. ಪ್ರೊಫೆಸರ್ ಎಂಎಸ್ ನಂಜುಂಡ ರಾವ್ ಹೆಸರಿನಲ್ಲಿ ನೀಡುತ್ತಿರುವ ರಾಷ್ಟ್ರಮಟ್ಟದ ಪ್ರಶಸ್ತಿ ಹಿರಿಯ ಕಲಾವಿದರಿಗೆ ನೀಡುತ್ತಿದ್ದು, ಇದು ಒಂದು ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಅದೇ ರೀತಿ ಉಳಿದ ಪ್ರಶಸ್ತಿಗಳು 50,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.
ಕಾರ್ಯಕ್ರಮದ ಉದ್ದೇಶ ವಿವರಿಸಿದ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್, ದೇಶದ ಪ್ರಮುಖ 10 ಚಿತ್ರಕಲಾ ಪರಿಷತ್ನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಸಹ ಒಂದಾಗಿದೆ. ಅತ್ಯುತ್ತಮ ಮೂಲ ಸೌಕರ್ಯ ಹಾಗೂ ಬೆಂಬಲವನ್ನ ಒಳಗೊಂಡು ಚಿತ್ರಕಲಾ ಪರಿಷತ್ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಚಿತ್ರಕಲಾ ಪರಿಷತ್ ಆರಂಭದಿಂದಲೂ ಈ ಸ್ಥಳದಲ್ಲಿ ಇರಲಿಲ್ಲ. ಬೇರೆ ಬೇರೆ ಸ್ಥಳಗಳಲ್ಲಿ ಅಂತಹ ಹಂತವಾಗಿ ಬೆಳೆದು ಇಂದು ಈ ಹಂತಕ್ಕೆ ತಲುಪಿದೆ.
ಚಿತ್ರಕಲಾ ಪರಿಷತ್ಗೆ ಎಸ್ಎಂಕೆ ಕೊಡುಗೆ:ಡಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಚಿತ್ರಕಲಾ ಪರಿಷತ್ ಸ್ಥಾಪನೆಗೆ ಎಸ್ಎಂ ಕೃಷ್ಣ ಅವರು ವಿಶೇಷ ಶ್ರಮ ವಹಿಸಿ ಪ್ರಯತ್ನಿಸಿ ಸಫಲರಾದರು. ಬೇರೆ ಉದ್ದೇಶಕ್ಕೆ ಈ ಸ್ಥಳವನ್ನು ನೀಡಲು ಸರ್ಕಾರ ತೀರ್ಮಾನಿಸಿದ್ದ ಸಂದರ್ಭದಲ್ಲಿ ಅವರ ಮನವೊಲಿಸಿ ಚಿತ್ರಕಲಾ ಪರಿಷತ್ತಿಗೆ ಕೊಡಿಸುವಲ್ಲಿ ಎಸ್ಎಂಕೆ ಸಹಾಯಕರಾದರು. ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಸಹ ಕೊಡಿಸಿದ್ದರು. ಇಂದು ಕರ್ನಾಟಕದ ಒಂದು ಪ್ರತಿಷ್ಠಿತ ಸಾಂಸ್ಕೃತಿಕ ಕೇಂದ್ರವಾಗಿ ಚಿತ್ರಕಲಾ ಪರಿಷತ್ ಬೆಳೆದಿದ್ದರೆ ಇಲ್ಲಿ ಸಾಕಷ್ಟು ಜನರ ಸಹಕಾರ ಇದೆ ಎಂದು ಬಿ ಎಲ್ ಶಂಕರ್ ಹೇಳಿದರು.
ಸಿಎಂ ಬೊಮ್ಮಾಯಿ ಅವರಿಂದ ಚಿತ್ರ ಸಂತೆ ಉದ್ಘಾಟನೆ:ಸಾಮಾನ್ಯ ಕಲಾವಿದರಿಗೂ ಅವಕಾಶ ಕಲ್ಪಿಸಬೇಕು ಎಂಬ ಸದುದ್ದೇಶದಿಂದ 20 ವರ್ಷಗಳ ಹಿಂದೆ ಚಿತ್ರಸಂತೆ ಆರಂಭಿಸಲಾಯಿತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂತೆಯ ಉದ್ಘಾಟನೆ ಮಾಡಲಿದ್ದಾರೆ. ಎಸ್ಎಮ್ ಕೃಷ್ಣ ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಇನ್ನಷ್ಟು ಸ್ಥಳವನ್ನು ಚಿತ್ರಕಲಾ ಪರಿಷತ್ಗೆ ನೀಡುವ ಕಾರ್ಯ ಮಾಡಿದ್ದಾರೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಹುತೇಕ ಮುಖ್ಯಮಂತ್ರಿಗಳ ಸಹಕಾರವನ್ನು ಸ್ಮರಿಸಲೇಬೇಕು. ಚಿತ್ರಕಲಾ ಪರಿಷತ್ ಚಟುವಟಿಕೆ ವಿಸ್ತಾರ ಗೊಳ್ಳುತ್ತಿದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷರು ಹೇಳಿದರು.