ಕರ್ನಾಟಕ

karnataka

ETV Bharat / state

ಶಾಂತಿನಗರದಲ್ಲಿ 'ಹ್ಯಾಟ್ರಿಕ್' ಹ್ಯಾರಿಸ್​ಗೆ ಪೈಪೋಟಿ ನೀಡುವುದೇ ಬಿಜೆಪಿ?

ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಎನ್​.ಎ.ಹ್ಯಾರಿಸ್ ಮತ್ತೊಂದು ಗೆಲುವಿನ ತವಕದಲ್ಲಿದ್ದಾರೆ. ಕಳೆದ ಎರಡು ಅವಧಿಗೆ ಇವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ವಾಸುದೇವ ಮೂರ್ತಿ ಮತ್ತೊಮ್ಮೆ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಜೆಡಿಎಸ್ ಟಿಕೆಟ್‌ಗೂ​ ಬೇಡಿಕೆ ಹೆಚ್ಚಿದೆ.

Shanti Nagar Assembly Constituency
Shanti Nagar Assembly Constituency

By

Published : Mar 16, 2023, 9:16 AM IST

Updated : Mar 16, 2023, 12:13 PM IST

ಬೆಂಗಳೂರು: ಹಲವು ಸಮಸ್ಯೆಗಳ ನಡುವೆಯೂ ಮತದಾರರ ಒಲವು ಕಳೆದುಕೊಳ್ಳದೇ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಕಾಂಗ್ರೆಸ್​ನ ಎನ್​.ಎ.ಹ್ಯಾರಿಸ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಬಿಜೆಪಿ 2004ರ ವೈಭವವನ್ನು ಮತ್ತೆ ಕಾಣುತ್ತಾ ಎನ್ನುವ ಕುತೂಹಲವನ್ನೂ ಶಾಂತಿನಗರ ವಿಧಾನಸಭೆ ಕ್ಷೇತ್ರ ಮೂಡಿಸಿದೆ. ಕ್ಷೇತ್ರ ಮರುವಿಂಗಡಣೆಯ ನಂತರ ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಮುಸ್ಲಿಂ ಮತದಾರರ ಒಲವನ್ನು ಹಿಡಿದಿಟ್ಟುಕೊಳ್ಳುವ ಜತೆಗೆ ಇತರೆ ಸಮುದಾಯದ ಮತಗಳನ್ನೂ ಪಡೆಯುತ್ತಿರುವ ಹ್ಯಾರಿಸ್ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ.

ಸಂಪೂರ್ಣ ಚಿತ್ರಣ: ಇವರ ಪುತ್ರ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸಾಕಷ್ಟು ವಿವಾದಕ್ಕೆ ಒಳಗಾದರೂ, ವೈಯಕ್ತಿಕ ವರ್ಚಸ್ಸನ್ನು ಕ್ಷೇತ್ರ ಹಾಗೂ ಪಕ್ಷದಲ್ಲಿ ಉಳಿಸಿಕೊಂಡಿದ್ದಾರೆ. ಕಳೆದ ಬಾರಿ ಪುತ್ರನ ಆಟಾಟೋಪದಿಂದ ಹ್ಯಾರಿಸ್​ಗೆ ಟಿಕೆಟ್ ಕೈತಪ್ಪಲಿದೆ ಎಂದು ಹೇಳಲಾಗಿತ್ತು. ಆದರೆ, ಗೆಲ್ಲುವುದಾಗಿ ಪಕ್ಷಕ್ಕೆ ಗ್ಯಾರಂಟಿ ನೀಡಿ ಸ್ಪರ್ಧಿಸಿ 18,205 ಮತಗಳ ಅಂತರದ ಗೆಲುವು ಸಾಧಿಸಿದ್ದರು. ಈ ಮೂಲಕ ತಮ್ಮ ಪ್ರಾಬಲ್ಯ ಮೆರೆದಿದ್ದರು. ಆದರೆ, ಈ ಸಲ ಅವರಿಗೆ ಬಿಜೆಪಿ, ಜೆಡಿಎಸ್​ ಹಾಗೂ ಆಮ್​ ಆದ್ಮಿ ಪಕ್ಷಗಳ ಸವಾಲು ಎದುರಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಜೆಡಿಎಸ್​ ಹಾಗೂ ಆಪ್​ ಸೆಳೆಯಲು ಶತಪ್ರಯತ್ನ ನಡೆಸಲಿವೆ. ಕಳೆದ ಸಾರಿ ಜೆಡಿಎಸ್​ ಶೇ.11 ಮತ್ತು ಆಪ್​ ಶೇ.2ರಷ್ಟು ಮತಗಳನ್ನು ಮಾತ್ರ ಸೆಳೆದಿದ್ದವು. ಆದರೆ, ಈ ಬಾರಿ ಅದು ಹೆಚ್ಚಳವಾಗುವ ಸಾಧ್ಯತೆ ಇದೆ. ಕಾಂಗ್ರೆಸ್​ ಸಾಂಪ್ರದಾಯಿಕ ಮತಬ್ಯಾಂಕ್​ಗೆ ಕನ್ನ ಬಿದ್ದರೆ ಗೆಲುವು ಕಷ್ಟ ಎಂಬ ವಿಚಾರ ರಾಜಕೀಯ ಪಂಡಿತರದ್ದು.

ಶಾಂತಿನಗರ ವಿಧಾನಸಭಾ ಕ್ಷೇತ್ರ

ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಹ್ಯಾರಿಸ್ 2018ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು ಶೇ.49ರಷ್ಟು ಅಂದರೆ 60,009 ಮತ ಗಳಿಸಿದ್ದರು. ಪ್ರತಿಸ್ಪರ್ಧಿ ಬಿಜೆಪಿಯ ವಾಸುದೇವ ಮೂರ್ತಿ ಶೇ. 34ರಷ್ಟು ಅಂದರೆ 41,804 ಮತ ಗಳಿಸಿದ್ದರು. ಜೆಡಿಎಸ್​ನ ಶ್ರೀಧರ್ ರೆಡ್ಡಿ ಶೇ.11 ರಷ್ಟು ಅಂದರೆ 13,569 ಮತಗಳಿಸಿದ್ದರು. ಪ್ರಸ್ತುತ ವರ್ಷ ಚಿತ್ರಣ ಬದಲಾಗಿದೆ. ಅಂತಿಮವಾಗಿ ಬಿಜೆಪಿ ಹಾಗೂ ಜೆಡಿಎಸ್​ನಿಂದ ಅವರೇ ಅಭ್ಯರ್ಥಿಯಾಗುತ್ತಾರೆ ಎನ್ನುವುದು ದೃಢಪಟ್ಟಿಲ್ಲ. ಕಾಂಗ್ರೆಸ್ ಭದ್ರಕೋಟೆ 1967 ರಿಂದ ಇಲ್ಲಿಯವರೆಗೆ ನಡೆದಿರುವ 12 ವಿಧಾನಸಭೆ ಚುನಾವಣೆಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ 9 ಬಾರಿ ಗೆಲುವು ಸಾಧಿಸಿದ್ದಾರೆ. ಅತಿ ಹೆಚ್ಚು ಹ್ಯಾರಿಸ್ ಗೆದ್ದಿದ್ದು, ಮೂರು ಬಾರಿ ನಿರಂತರವಾಗಿ ಗೆಲ್ಲುತ್ತಾ ಬಂದಿದ್ದಾರೆ. 1967ರಲ್ಲಿ ಎ. ನಂಜಪ್ಪ, 1972 ರಲ್ಲಿ ಕೆ.ಆರ್.ಶ್ರೀನಿವಾಸಲು ನಾಯ್ಡು, 1978ರಲ್ಲಿ ಪಿ.ಕೆ.ರಂಗನಾಥ್ ಕಾಂಗ್ರೆಸ್​ನಿಂದ ಗೆದ್ದಿದ್ದರು. 1983ರಲ್ಲಿ ಪಿ.ಡಿ.ಗೋವಿಂದರಾಜ್ ಜನತಾ ಪಾರ್ಟಿಯಿಂದ ಗೆದ್ದು ಶಾಸಕರಾಗಿದ್ದರು. 1985ರಲ್ಲಿ ಸಿ.ಕಣ್ಣನ್, 1989ರಲ್ಲಿ ಎಂ.ಮುನಿಸ್ವಾಮಿ ಕಾಂಗ್ರೆಸ್​ನಿಂದ ಗೆದ್ದರು. 1994 ರಲ್ಲಿ ಡಿ.ಜಿ.ಹೇಮಾವತಿ ಜನತಾದಳದಿಂದ ಗೆದ್ದರೆ, ಎಂ.ಮುನಿಸ್ವಾಮಿ ಅವರು 1999ರಲ್ಲಿ ಕೈ ಶಾಸಕರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಬಿಜೆಪಿಯಿಂದ ಎಸ್​.ರಘು ಗೆದ್ದರೆ, 2008, 2013, 2018ರಲ್ಲಿ ಸತತವಾಗಿ ಎನ್​.ಎ.ಹ್ಯಾರಿಸ್ ಗೆಲುವು ಸಾಧಿಸುತ್ತಾ ಬಂದಿದ್ದಾರೆ.

ಎನ್​.ಎ. ಹ್ಯಾರಿಸ್

ಕಾಂಗ್ರೆಸ್​ನಿಂದ ಹ್ಯಾರಿಸ್ ಅವರೇ ಅಭ್ಯರ್ಥಿ ಎನ್ನಲಾಗುತ್ತಿದೆ. ಅಭ್ಯರ್ಥಿ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ಉಳಿದಂತೆ ಇವರಿಗೆ ಪ್ರತಿಸ್ಪರ್ಧಿ ಇಲ್ಲ. ಕಳೆದೆಡು ಅವಧಿಗೆ ಹ್ಯಾರಿಸ್​ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ವಾಸುದೇವ ಮೂರ್ತಿ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಇವರಿಗೆ ಸ್ಪರ್ಧಿಯಾಗಿ ಮಾಜಿ ಮೇಯರ್​ ಗೌತಮ್ ಕುಮಾರ್ ಜೈನ್, ಬಿಬಿಎಂಪಿ ಸದಸ್ಯರಾಗಿದ್ದ ಶಿವಕುಮಾರ್ ಆಕಾಂಕ್ಷಿಗಳು. ಇದೆಲ್ಲವನ್ನೂ ಮೀರಿ ಕ್ರಿಶ್ಚಿಯನ್ನರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಆಲ್ ಇಂಡಿಯಾ ಕ್ರಿಶ್ಚಿಯನ್ ವಾಯ್ಸ್ ಮುಖಂಡರು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ. ಅವರು ತಮ್ಮ ಸಮುದಾಯದ ಸೆಬಾಸ್ಟಿಯನ್ ಅಂಥೋಣಿಗೆ ಟಿಕೆಟ್ ನೀಡಿ ಎಂದು ಕೋರಿದ್ದಾರೆ. ಜೆಡಿಎಸ್​ನಿಂದ ಶ್ರೀಧರ್ ರೆಡ್ಡಿ ಆಕಾಂಕ್ಷಿ. ಇವರ ಜತೆ ಮಂಜುನಾಥ್ ಗೌಡ ಸಹ ಟಿಕೆಟ್ ಕೇಳುತ್ತಿದ್ದಾರೆ ಎಂಬ ಮಾಹಿತಿ ಇದೆ.

ಕ್ಷೇತ್ರದ ಸಮಸ್ಯೆಗಳೇನು?:ಕ್ಷೇತ್ರದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಇಕ್ಕಟ್ಟಾದ ರಸ್ತೆ, ಮಳೆ ಬಂದಾಗ ಉಕ್ಕುವ ರಾಜಕಾಲುವೆ, ಕಿರಿದಾದ ಸಂದಿಗೊಂದಿ ಅಭಿವೃದ್ಧಿಗೆ ತೊಡಕಾಗಿವೆ. ನೈರ್ಮಲ್ಯ ಕೊರತೆಯೂ ಹೆಚ್ಚೇ ಇದೆ. ತ್ಯಾಜ್ಯ ವಿಲೇವಾರಿ ಕೊರತೆ ಇದೆ. ಚರಂಡಿಗಳು ದೋಷಪೂರಿತವಾಗಿವೆ. ಇದರ ನಡುವೆಯೇ ಸಾರಿಗೆ ಕೇಂದ್ರ ಕಚೇರಿ, ವಿವಿಧ ವಾಣಿಜ್ಯ ಮಳಿಗೆಗಳು ಜನವಸತಿ ಪ್ರದೇಶದ ಮಧ್ಯದಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಮಳೆಗಾಲದ ಸಮಸ್ಯೆಗಳೂ ಹೇರಳವಾಗಿವೆ. ಇದಕ್ಕೆಲ್ಲಾ ಮೂರು ಅವಧಿ ಶಾಸಕರಾದರೂ ಹ್ಯಾರಿಸ್ ಪರಿಹಾರ ಹುಡುಕಿಲ್ಲ ಎನ್ನುವ ಆರೋಪವಿದೆ. ಆದರೆ, ಇವರಿಗೆ ಸೂಕ್ತ ಪ್ರತಿಸ್ಪರ್ಧಿ ಇಲ್ಲದಿರುವುದು ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು ಸಂಪೂರ್ಣವಾಗಿ ಇವರ ಕೈ ಹಿಡಿದಿರುವುದು ಹ್ಯಾರಿಸ್ ಓಟಕ್ಕೆ ಕಡಿವಾಣ ಇಲ್ಲದಂತೆ ಮಾಡಿದೆ.

ಕ್ಷೇತ್ರದಲ್ಲಿ ಮತದಾರರ ವಿವರ: ಕ್ಷೇತ್ರದಲ್ಲಿರುವ ಒಟ್ಟು ಮತದಾರರು 2,25,000. ಮುಸ್ಲಿಮರ ವೋಟ್‌ಗಳೇ ನಿರ್ಣಾಯಕ. ತಮಿಳು ಭಾಷಿಕರು, ಕುರುಬರು, ಎಸ್‌ಸಿ-ಎಸ್‌ಟಿ, ತೆಲುಗು ಭಾಷಿಕರು, ಮಲಯಾಳಿ ಭಾಷಿಕರಿದ್ದಾರೆ. ಬ್ರಾಹ್ಮಣ ಸಮುದಾಯ, ಲಿಂಗಾಯತರು, ದೇವಾಂಗ ಸಮುದಾಯ ಹಾಗೂ ಒಕ್ಕಲಿಗರು ಕೂಡ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ:ದಕ್ಷಿಣ ಕನ್ನಡದ ಕುತೂಹಲದ ಕ್ಷೇತ್ರ ಬಂಟ್ವಾಳ: ಮಾಜಿ ಸಚಿವ-ಹಾಲಿ ಶಾಸಕರ ಮಧ್ಯೆ ಬಿಗ್ ಫೈಟ್

Last Updated : Mar 16, 2023, 12:13 PM IST

ABOUT THE AUTHOR

...view details