ಕರ್ನಾಟಕ

karnataka

ETV Bharat / state

67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.. ಇದೇ ಮೊದಲ ಬಾರಿಗೆ 5 ಲಕ್ಷ ನಗದು, 25 ಗ್ರಾಂ ಬಂಗಾರ, ಪ್ರಶಸ್ತಿ ಫಲಕ - ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ

ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಅರ್ಜಿಗಳನ್ನು ಹೆಚ್ಚು ಸ್ವೀಕಾರ ಮಾಡದೇ, ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಸೇವಾ ಸಿಂಧು ಆ್ಯಪ್​ನಲ್ಲಿ 9000 ಅರ್ಜಿಗಳು ಬಂದಿದ್ದವು. ಅರ್ಜಿ ಹಾಕಿದವರಿಗಿಂತ, ಸಮಿತಿ ಗುರುತಿಸಿದವರಿಗೆ ಪ್ರಶಸ್ತಿ ಕೊಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು.

kannada-rajyotsava-award-presentation-to-67-dignitaries-in-bengaluru
67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

By

Published : Nov 1, 2022, 9:55 PM IST

ಬೆಂಗಳೂರು:ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯ ಸರ್ಕಾರದಿಂದ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳ 67 ಗಣ್ಯರಿಗೆ ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಯಿತು. ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ 5 ಲಕ್ಷ ರೂ. ನಗದು 25 ಗ್ರಾಂ ಬಂಗಾರ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಬೆಳಗುವ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು. ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಪ್ರಶಸ್ತಿ ಫಲಕದೊಂದಿಗೆ ಸಾಧಕರಿಗೆ ಸನ್ಮಾನಿಸಲಾಯಿತು. ಇದಕ್ಕೂ ಮೊದಲು ತಾಯಿ ಭುವನೇಶ್ವರಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು.

67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್, ಸಿನಿಮಾ ಕ್ಷೇತ್ರದಲ್ಲಿ ದತ್ತಣ್ಣ, ಅವಿನಾಶ್ ಹಾಗೂ ಕಿರುತೆರೆ ವಿಭಾಗದಲ್ಲಿ ಸಿಹಿ ಕಹಿ ಚಂದ್ರು ಅವರನ್ನು ಆಯ್ಕೆ ಮಾಡಲಾಗಿದೆ. ಸೋಲಿಗರ ಮಾದಮ್ಮ ವಿದ್ವಾನ್ ಗೋಪಾಲ ಕೃಷ್ಣ ಶರ್ಮ, ಸಾಲುಮರದ ನಿಂಗಣ್ಣ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ಅ.ರಾ.ಮಿತ್ರ, ಪ್ರೊ.ಕೃಷ್ಣಗೌಡ ಹಾಗೂ ನ್ಯಾಯಾಂಗದಲ್ಲಿ ವೆಂಕಟಾಚಲಪತಿ ಸೇರಿ 67 ಜನರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಹಿಂದೆ ದೊಡ್ಡ ಕಥೆ, ಪ್ರಯತ್ನ ಇದೆ:ಸಮಾರಂಭ ಉದ್ದೇಶಿಸಿ ಮಾತನಾಡಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು ತಿಳಿಸಿದರು. ನಾವು ಚಿಕ್ಕವರಿದ್ದಾಗ, ನಾವು ತೊದಲು ನುಡಿಯುವಾಗ ನಮ್ಮ ತಾಯಿ ಕೊಟ್ಟ ಮುತ್ತಿನ ಪ್ರಶಸ್ತಿಯನ್ನು ನಾವು ಮರಿಯೋಕೆ ಆಗಲ್ಲ. ಶಾಲಾ ಹಂತದಲ್ಲಿ ಶಿಕ್ಷಕರು ಕೊಡುವ ಪ್ರಶಸ್ತಿಯನ್ನು ಮರಿಯೋಕೆ ಆಗಲ್ಲ. ಹೀಗೆ ಬದುಕಿನ ಎಲ್ಲ ಹಂತದಲ್ಲಿಯೂ ಪ್ರಶಸ್ತಿ ಇರುತ್ತದೆ. ಪ್ರಶಸ್ತಿ ಹಿಂದೆ ದೊಡ್ಡ ಕಥೆ, ಪ್ರಯತ್ನ ಇರುತ್ತದೆ ಎಂದರು.

ಇದನ್ನೂ ಓದಿ:ಯುದ್ಧ ಮಾಡದೇ ರಾಜ್ಯ ಗೆದ್ದಿರುವ ರಾಜ‘ಕುಮಾರ’​: ಕನ್ನಡದಲ್ಲೇ ಜ್ಯೂ ಎನ್​ಟಿಆರ್​ ಬಣ್ಣನೆ

ಬದುಕಿನಲ್ಲಿ ಎರಡು ವಿಚಾರ ಬಹಳ‌ ಕಷ್ಟ. ಮುಗ್ಧತೆ ಕಾಪಾಡಿಕೊಳ್ಳುವುದು ಕಷ್ಟ. ಆತ್ಮಸಾಕ್ಷಿ ಅನುಗುಣವಾಗಿ ನಡೆದುಕೊಳ್ಳುವುದು. ಇವರೆಡನ್ನ ಯಾರು ಮಾಡ್ತಾರೋ ಅವರು ದೊಡ್ಡ ಸಾಧಕರಾಗುತ್ತಾರೆ. ರಾಜ್ಯೋತ್ಸವ ಪ್ರಶಸ್ತಿ ಪಡೆದವರನ್ನು ಗುರುತು ಮಾಡಿ ಅವರ ಅನುಭವ, ಸಂದೇಶವನ್ನ ಕಲೆ ಹಾಕಿ‌ ಅಂತಾ ಸಚಿವ ಸುನೀಲ್ ಕುಮಾರ್ ಅವರಿಗೆ ಸಿಎಂ ಹೇಳಿದರು.

ಪ್ರಶಸ್ತಿ ಪಡೆದವರು ನಾಡು ಕಟ್ಟುವಲ್ಲಿ ಹೇಗೆ ಶ್ರಮಿಸಿದರು ಅನ್ನೋದನ್ನು ತಿಳಿದುಕೊಳ್ಳಬೇಕು. ಅವರ ಅನುಭವದಿಂದ ನಾಡು ಕಟ್ಟುವ ಒಂದು ಕೃತಿಯನ್ನ ಬಿಡುಗಡೆ ಮಾಡಬೇಕು. ಆ ಕೃತಿಯನ್ನು ಎಲ್ಲ ವಿದ್ಯಾರ್ಥಿಗಳಿಗೆ ಹಂಚಬೇಕು. ನಾಡು ಕಟ್ಟಲು ಭಿನ್ನಾಭಿಪ್ರಾಯ ಇರಬಾರದು. ನಾವೆಲ್ಲ ಒಗ್ಗಟ್ಟಾಗಿ ಇರಬೇಕು. ಜನರನ್ನು ಫಲಾನುಭವಿಯನ್ನಾಗಿಸದ, ಪಾಲುದಾರರನ್ನಾಗಿ ಮಾಡಬೇಕೆಂದರು.

ವಯಸ್ಸಿನ ಗಡಿಮಿತಿ ಇಲ್ಲದೇ ಪ್ರಶಸ್ತಿ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಕೊಟ್ಟಿರೋದಕ್ಕೆ ಇಡೀ ಕರ್ನಾಟಕ ಸಂಭ್ರಮಿಸುತ್ತಿದೆ. 60 ವರ್ಷ ಆದವರಿಗೆ ಮಾತ್ರ ಪ್ರಶಸ್ತಿ ಅಂತಾ ಮಾಡಿರುವುದು ತಪ್ಪು. ಸಣ್ಣ ವಯಸ್ಸಿನಲ್ಲಿಯೇ ಪ್ರಶಸ್ತಿ ಕೊಟ್ರೆ, ಇನ್ನು ಹೆಚ್ಚಿನ ಸಾಧನೆ ಮಾಡಲು ಆಗತ್ತದೆ. ಮುಂದಿನ ವರ್ಷದ ಇದರ ಬದಲಾವಣೆ ಆಗಲೇಬೇಕು. ವಯಸ್ಸಿನ ಗಡಿಮಿತಿ ಇಲ್ಲದೇ ನಿಜವಾದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಸಿಎಂ ಹೇಳಿದರು.

ಇದಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಮಾತನಾಡಿ, 67 ಜನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದೇವೆ. ಈ ಸಾರಿ ಅರ್ಜಿಗಳನ್ನು ಹೆಚ್ಚು ಸ್ವೀಕಾರ ಮಾಡದೇ, ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಸೇವಾ ಸಿಂಧು ಆ್ಯಪ್​ನಲ್ಲಿ 9000 ಅರ್ಜಿಗಳು ಬಂದಿದ್ದವು. ಅರ್ಜಿ ಹಾಕಿದವರಿಗಿಂತ, ಸಮಿತಿ ಗುರುತಿಸಿದವರಿಗೆ ಪ್ರಶಸ್ತಿ ಕೊಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್ ಭಾಗಿಯಾಗಿದ್ದರು.

ಇದನ್ನೂ ಓದಿ:ಮಳೆ ಸಿಂಚನದ ಮಧ್ಯೆ ಪುನೀತ್ ರಾಜಕುಮಾರ್​​ಗೆ ​​ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ABOUT THE AUTHOR

...view details