ಬೆಂಗಳೂರು : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ನಿಲ್ದಾಣದ ಲಾಂಛನದಲ್ಲಿ ಕನ್ನಡವನ್ನು ಬಳಸಿಕೊಂಡಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದ ಲಾಂಛನವು ಸಂಪೂರ್ಣ ಆಂಗ್ಲ ಭಾಷೆಯಲ್ಲಿತ್ತು. ಈ ಬಗ್ಗೆ ತಮ್ಮ ಗಮನಕ್ಕೆ ಬರುತ್ತಿದ್ದಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಪ್ರಾಧಿಕಾರಕ್ಕೆ ಸೂಚಿಸಿದ್ದರು.
ಅದರಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ ಸಂತೋಷ್ ಹಾನಗಲ್ ಅವರು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು, ವಿಮಾನ ನಿಲ್ದಾಣದ ಲಾಂಛನ ಆಂಗ್ಲ ಭಾಷೆಯಲ್ಲಿದ್ದು, ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸಂಸ್ಥೆಗಳು ಇಲ್ಲಿನ ಭಾಷಾ ಸಂಸ್ಕೃತಿ ಗೌರವಿಸುವುದು ಪ್ರಾಥಮಿಕ ಜವಾಬ್ದಾರಿ. ಕೂಡಲೇ ಲಾಂಛನದಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.
ಪ್ರಾಧಿಕಾರದ ಕಾರ್ಯದರ್ಶಿ ಪತ್ರ ತಲುಪುತ್ತಿದ್ದಂತೆ ಎಚ್ಚೆತ್ತ ವಿಮಾನ ನಿಲ್ದಾಣದ ಅಧಿಕಾರಿಗಳು ತಮ್ಮ ಲಾಂಛನದಲ್ಲಿ ಕನ್ನಡ ಭಾಷೆಯನ್ನು ಬಳಸಿದ್ದಾರೆ. ಈ ಬಗ್ಗೆ ಪ್ರಾಧಿಕಾರಕ್ಕೆ ಪತ್ರವನ್ನು ಕೂಡ ಬರೆದಿರುವ ನಿಲ್ದಾಣದ ಅಧಿಕಾರಿ ದಿನೇಶ್ ಕುಮಾರ್, ಕನ್ನಡ ಭಾಷೆ ಬೆಳವಣಿಗೆ, ಇಲ್ಲಿನ ಸಂಸ್ಕೃತಿ ಉಳಿವಿಕೆಗೆ ನಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜತೆ ಕೆಲಸ ಮಾಡಲಿದ್ದೇವೆ. ಮುಂದಿನ ನಮ್ಮ ಯಾವುದೇ ಕಾರ್ಯಕ್ರಮ ಹಾಗೂ ಪತ್ರ ವ್ಯವಹಾರದಲ್ಲಿ ಹೆಚ್ಚಾಗಿ ಕನ್ನಡ ಭಾಷೆ ಬಳಕೆ ಮಾಡಲಾಗುವುದು. ಅಲ್ಲದೇ, ನಿಲ್ದಾಣದ ಪ್ರತಿಯೊಂದು ಸೂಚನಾ ಫಲಕಗಳನ್ನು ಕನ್ನಡದಲ್ಲಿ ಬಳಸಲಾಗುವುದು, ಸಾಮಾಜಿಕ ಜಾಲತಾಣದಲ್ಲಿಯೂ ಕನ್ನಡವನ್ನು ಬಳಕೆ ಮಾಡುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳಿಗೆ ನೆಲ, ಜಲ, ವಿದ್ಯುತ್ ಇತ್ಯಾದಿ ಸೌಲಭ್ಯಗಳನ್ನು ರಾಜ್ಯ ಸರ್ಕಾರ ನೀಡುತ್ತಿದ್ದು, ಸ್ಥಳೀಯ ಭಾಷೆಯ ಬೆಳವಣಿಗೆ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ಭಾಷೆ, ನೆಲ, ಜಲದ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ವಿಮಾನ ನಿಲ್ದಾಣದಲ್ಲಿ ಕನ್ನಡ ಬಳಕೆ ಮಾಡಿದ ನಿಲ್ದಾಣದ ಅಧಿಕಾರಿಗಳ ನಡೆ ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ಮೈಲಿಗಲ್ಲು: 300 ಮಿಲಿಯನ್ ಪ್ರಯಾಣಿಕರು ಕೆಐಎಎಲ್ನಿಂದ ಪ್ರಯಾಣ